ADVERTISEMENT

ಕೊರೊನಾ ಸೇನಾನಿಗಳಿಗೆ ದೇವಸ್ಥಾನ ಟ್ರಸ್ಟ್‌ ನೆರವು

ಕೆ.ಆರ್‌.ಪೇಟೆ ಭೂವರಾಹನಾಥ ದೇವಸ್ಥಾನದ ಕೊಡುಗೆ

ಬಲ್ಲೇನಹಳ್ಳಿ ಮಂಜುನಾಥ
Published 11 ಜೂನ್ 2021, 1:15 IST
Last Updated 11 ಜೂನ್ 2021, 1:15 IST
ಕೆ.ಆರ್.ಪೇಟೆ ತಾಲ್ಲೂಕಿನ ವರಾಹನಾಥ ಕಲ್ಲಹಳ್ಳಿ ದೇವಸ್ಥಾನದಲ್ಲಿ ಭೂ ವರಾಹನಾಥಸ್ವಾಮಿ ದೇವಾಲಯದ ವತಿಯಿಂದ ಕೊರೊನಾ ನಿಯಂತ್ರಣಕ್ಕೆ ಪ್ರತಿ ಹಳ್ಳಿಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಪಲ್ಸ್ ಆಕ್ಸಿ ಮೀಟರ್‌, ಡಿಜಿಟಲ್ ಥರ್ಮಾ ಮೀಟರ್‌ಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ವರಾಹನಾಥ ಕಲ್ಲಹಳ್ಳಿ ದೇವಸ್ಥಾನದಲ್ಲಿ ಭೂ ವರಾಹನಾಥಸ್ವಾಮಿ ದೇವಾಲಯದ ವತಿಯಿಂದ ಕೊರೊನಾ ನಿಯಂತ್ರಣಕ್ಕೆ ಪ್ರತಿ ಹಳ್ಳಿಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಪಲ್ಸ್ ಆಕ್ಸಿ ಮೀಟರ್‌, ಡಿಜಿಟಲ್ ಥರ್ಮಾ ಮೀಟರ್‌ಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದರು   

ಕೆ.ಆರ್.ಪೇಟೆ: ಕೊರೊನಾ ಸಂಕಷ್ಟದ ಕಾಲದಲ್ಲಿ ಗ್ರಾಮಾಂತರ ಪ್ರದೇಶದ ಜನರನ್ನು ಸೋಂಕಿನಿಂದ ಕಾಪಾಡಿ ಆರೋಗ್ಯ ಶಿಕ್ಷಣ ನೀಡುತ್ತಿರುವ ಕೊರೊನಾ ವಾರಿಯರ್‌ಗಳಿಗೆ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಟ್ರಸ್ಟ್ ನೆರವಾಗುತ್ತಿದೆ.

ವೈದ್ಯಕೀಯ ಉಪಕರಣಗಳಾದ ರಕ್ತದೊತ್ತಡ, ಆಕ್ಸಿಜನ್‌ ಮಟ್ಟ, ಪಲ್ಸ್ ಪ್ರಮಾಣ, ಜ್ವರದ ವಿವರ ತಿಳಿಯಲು ಅಗತ್ಯ ಇರುವ ಉಪಕರಣಗಳನ್ನು 230 ಆಶಾ ಕಾರ್ಯಕರ್ತೆಯರು ಸೇರಿ 250 ಕ್ಕೂ ಅಧಿಕ ಮಂದಿಗೆ ಟ್ರಸ್ಟ್‌ ನೀಡುತ್ತಿದೆ.

ಆಶಾ, ಅಂಗನವಾಡಿ ಮತ್ತು ಶಿಕ್ಷಕರು ಮನೆ ಬಾಗಿಲಿಗೆ ತೆರಳಿ ಕೊರೊನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದರೂ ಇಂಥ ಉಪಕರಣಗಳ ಕೊರತೆ ಇತ್ತು. ಜನರ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಾಗದೆ ತೊಂದರೆ ಪಡುತ್ತಿರುವುದನ್ನು ಗಮನಿಸಿದ ದೇವಸ್ಥಾನ ಆಡಳಿತ ಮಂಡಳಿ ಈ ಸಾಧನಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ.

ADVERTISEMENT

ಮೈಸೂರಿನ ಪರಕಾಲಮಠದ ನಿಯಂತ್ರಣದಲ್ಲಿರುವ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಕಳೆದ ವರ್ಷ ಮೂರು ತಿಂಗಳು ಅನ್ನ ದಾಸೋಹ ಮಾಡಿತ್ತು. ಈ ಬಾರಿ ಕೊರೊನಾ ಸಂಕಷ್ಟದ ತೀವ್ರತೆ ಅರಿತುಕೊಂಡ ದೇವಸ್ಥಾನದ ಆಡಳಿತ ಮಂಡಳಿ, ಮೈಸೂರಿನ ಪರಕಾಲ ಮಠದ ಭಕ್ತರ ನೆರವಿನಿಂದ ಜಿಲ್ಲೆಗೆ ಈ ಕೊಡುಗೆ ನೀಡಲು ನಿಶ್ಚಯಿಸಿದೆ. ಪ್ರಾಥಮಿಕ ಹಂತವಾಗಿ ತಾಲ್ಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನೀಡಿದೆ. ದೇವಸ್ಥಾನದ ಕೊಡುಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರೂ ಪ್ರಶಂಶಿಸಿದ್ದಾರೆ.

ಈ ಸಾಧನಗಳ ಸೆಟ್‌ಗೆ ₹ 5 ಸಾವಿರದಂತೆ ಒಟ್ಟು ₹ 15 ಲಕ್ಷ ಮೌಲ್ಯದ ವೈದ್ಯಕೀಯ ಸಾಧನಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ದಾನಿಗಳು ಸಹಕರಿಸಿದರೆ ಇಡೀ ಜಿಲ್ಲೆಗೆ ಈ ಕಾರ್ಯ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್.

ದೇವಸ್ಥಾನದವರು ಕಳೆದ ಬಾರಿ ಅನ್ನದಾಸೋಹ ಮಾಡಿದ್ದರು. ಈ ಬಾರಿ ವೈದ್ಯಕೀಯ ಸಾಧನಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್ ತಿಳಿಸಿದರು.

ದೇವಸ್ಥಾನದವರು ಪರಿಕರ ನೀಡಿರು ವುದರಿಂದ ನಮ್ಮ ಕೆಲಸಕ್ಕೆ ಬಲ ಬಂದಿದೆ ಎಂದು ಆಶಾ ಕಾರ್ಯಕರ್ತೆಯರು ಖುಷಿ ಪಡುತ್ತಾರೆ.

ದಾನಿಗಳಾದ ಟ್ರಸ್ಟಿ ಶ್ರೀನಿವಾಸ ರಾಘವನ್, ವಿತರಕರಾದ ಪ್ರತಾಪ್, ಸಿದ್ದೇಶ್, ನಿರ್ವಾಹಕ ಬೋರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.