ADVERTISEMENT

ಮಂಡ್ಯ: ತಂಬಾಕು ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:04 IST
Last Updated 6 ಜನವರಿ 2026, 6:04 IST
ತಂಬಾಕು ಬೆಳೆಗೆ ವೈಜ್ಞಾನಿಕ ದರ ನೀಡಬೇಕು ಮತ್ತು ಬೆಳೆಗಾರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು 
ತಂಬಾಕು ಬೆಳೆಗೆ ವೈಜ್ಞಾನಿಕ ದರ ನೀಡಬೇಕು ಮತ್ತು ಬೆಳೆಗಾರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು    

ಮಂಡ್ಯ: ‘ಕೇಂದ್ರ ಸರ್ಕಾರ ತಂಬಾಕು ಬೆಳೆಗೆ ವೈಜ್ಞಾನಿಕ ಬೆಲೆ ನೀಡುವ ಮೂಲಕ ತಂಬಾಕು ಬೆಳೆಗಾರರನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಒಗ್ಗೂಡಿದ ರೈತ ಸಂಘದ ಕಾರ್ಯಕರ್ತರು, ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಚೇರಿಯ ಸಹಾಯಕರ ಮೂಲಕ ಮನವಿ ಸಲ್ಲಿಸಿದರು.

ತಂಬಾಕು ಮಂಡಳಿಯು ರಫ್ತು ಮಾರುಕಟ್ಟೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ತಂಬಾಕು ಬೆಳೆಗಾರರಿಗೆ ಗರಿಷ್ಠ 100 ಮಿಲಿಯನ್ ಕೆ.ಜಿ. ತಂಬಾಕು ಬೆಳೆಯಲು ಅನುಮತಿ ನೀಡಿದ್ದು, ಕಳೆದ ಮೇ, ಜೂನ್, ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತಂಬಾಕು ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ. ಈಗ 80ರಿಂದ 85 ಮಿಲಿಯನ್ ಕೆ.ಜಿ. ತಂಬಾಕು ಉತ್ಪಾದಿಸುವ ಆಶಾಭಾವನೆ ಹೊಂದಿದೆ. ಕರ್ನಾಟಕ ತಂಬಾಕು ಬೆಳೆಗಾರರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ತಂಬಾಕು ಮಂಡಳಿಯ ಕಡಿತ ಮಾಡುವ ಧೋರಣೆಯಿಂದಾಗಿ ಹಿನ್ನಡೆ ಉಂಟಾಗಿದೆ ಎಂದು ಆರೋಪಿಸಿದರು.

ADVERTISEMENT

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ರಾಮನಾಥಪುರ, ಎಚ್.ಡಿ. ಕೋಟೆ ಹಾಗೂ ಮೂರು ಮುಖ್ಯ ಜಿಲ್ಲೆಗಳಾದ ಮೈಸೂರು, ಹಾಸನ ಮತ್ತು ಚಾಮರಾಜನಗರಗಳಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. 40 ಸಾವಿರಕ್ಕೂ ಹೆಚ್ಚಿನ ನೋಂದಾಯಿತ ತಂಬಾಕು ಬೆಳೆಗಾರರು 50 ಸಾವಿರ ಬ್ಯಾರನ್‍ಗಳನ್ನು ಹೊಂದಿದ್ದು, ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ತಂಬಾಕು ಮಂಡಳಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ಇರುವುದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಕೋಶಾಧ್ಯಕ್ಷ ಎಸ್.ಕೆ.ರವಿಕುಮಾರ್, ಮುಖಂಡರಾದ ಎಚ್.ಬಿ. ಕೃಷ್ಣೇಗೌಡ, ಎಸ್.ಕೆ. ಯೋಗಣ್ಣ, ರಮೇಶ, ಪ್ರದೀಪ, ಎಸ್.ಬಿ. ಬಲರಾಮೇಗೌಡ, ರವಿ, ವಿವೇಕ್, ರವಿಕುಮಾರ್, ಆಂಜನೀಗೌಡ, ಲತಾ ಶಂಕರ್, ಕೆ.ಬಿ. ಜಯಣ್ಣ, ಚನ್ನಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಬೆಳೆಗಾರರಿಗೆ ಅಧಿಕ ಖರ್ಚು’

ತಂಬಾಕು ಬೆಳೆ ಕಟಾವು ಮಾಡಿದ ನಂತರ ಅದನ್ನು ಬೇಯಿಸಲು ಸೌದೆ ಖರ್ಚು ಕೂಲಿ ಬೇಲ್ ಮಾಡುವುದು ಮತ್ತಿತರ ಅಂತಿಮ ಹಂತದ ಖರ್ಚುಗಳೂ ಹೆಚ್ಚಾಗಿವೆ. ಈ ಹಿಂದೆ ಪ್ರತಿ ಕೆಜಿಗೆ ₹350ಕ್ಕೆ ರೈತರಿಂದ ಖರೀದಿಸಲಾಗುತ್ತಿತ್ತು. ಕಳೆದ ಸಾಲಿನಲ್ಲಿ ₹250 ಸರಾಸರಿ ಬೆಲೆಗೆ ತಂಬಾಕನ್ನು ಖರೀದಿಸಿದ್ದಾರೆ. ಇದು ತಂಬಾಕು ಉತ್ಪಾದನಾ ವೆಚ್ಚದ ಅಂದರೆ ₹220 ಪ್ರತಿ ಕೆಜಿಗೆ ಕೇವಲ ₹30 ಆದಾಯವಾಗುತ್ತಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡರು. ತಂಬಾಕು ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ತಂಬಾಕು ಮಂಡಳಿಯು ರೈತರ ಹಿತವನ್ನು ಕಾಪಾಡಲು ಬೆಳೆ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಧಿಕ ಉತ್ಪಾದಕ ತಂಬಾಕಿಗೆ ವೈಜ್ಞಾನಿಕ ರೀತಿಯಲ್ಲಿ ದಂಡವನ್ನು ವಿಧಿಸಬೇಕಾಗಿದೆ. ಇದರಿಂದ ಅಧಿಕ ಉತ್ಪಾದಕ ರಾಜ್ಯಗಳಿಗೆ ಬೆಳೆ ನಿಯಂತ್ರಣದ ಸೂತ್ರ ಜಾರಿಯಾದರೆ ಅಧಿಕ ಉತ್ಪಾದನೆ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ ವೈಜ್ಞಾನಿಕ ದರ ನಿಗದಿಪಡಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.