ADVERTISEMENT

ಮಂಡ್ಯ | ಸೆ.10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಜಿಲ್ಲಾಧಿಕಾರಿ ಕುಮಾರ

ತಾಲ್ಲೂಕು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ನೀಡಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:24 IST
Last Updated 20 ಆಗಸ್ಟ್ 2025, 2:24 IST
ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು
ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು   

ಮಂಡ್ಯ: ಜಿಲ್ಲೆಯಲ್ಲಿ ಸೆ.10ರಿಂದ 45 ದಿನ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ADVERTISEMENT

ಸಮೀಕ್ಷೆ ಕೈಗೊಳ್ಳಲು ಪ್ರತಿ ತಾಲ್ಲೂಕಿಗೆ ಒಬ್ಬರಂತೆ 7 ತಾಲ್ಲೂಕುಗಳಲ್ಲಿ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿರುತ್ತದೆ. ಸಮೀಕ್ಷೆದಾರರು ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗೆ ಭೇಟಿ ನೀಡಿ ನಿಖರ ಮಾಹಿತಿ ನೀಡಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ‘ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು ರೂಪಿಸಲು, ಸವಲತ್ತುಗಳನ್ನು ಒದಗಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸುತ್ತದೆ. ಇದು ಸ್ವಯಂಪ್ರೇರಿತ ಸಮೀಕ್ಷೆಯಾಗಿರುತ್ತದೆ. ಲಿಂಗತ್ವ ಅಲ್ಪಸಂಖ್ಯಾತರು ಖುದ್ದು ತಾಲ್ಲೂಕು ಆಸ್ಪತ್ರೆಗೆ ಆಗಮಿಸಿ ಮಾಹಿತಿ ನೀಡಬೇಕಿರುತ್ತದೆ. ಇದರ ಬಗ್ಗೆ ಸಮುದಾಯದಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ಸಮೀಕ್ಷೆಯನ್ನು ನಡೆಸಿ’ ಎಂದು ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಡಿಎಲ್‌ಒ ಸೋಮಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್.ಎಚ್, ಮಹಿಳಾ ಸಬಲೀಕರಣ ಘಟಕದ ಪುಷ್ಪಾ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

‘1039 ಮಂದಿ ಗುರುತು’:

ಈ ಹಿಂದೆ ಜಿಲ್ಲೆಯಲ್ಲಿ ಆಶೋದಯ ಸಮಿತಿಯಿಂದ ನಡೆಸಿದ ಸಮೀಕ್ಷೆಯಲ್ಲಿ 1039 ಲಿಂಗತ್ವ ಅಲ್ಪಸಂಖ್ಯಾರನ್ನು ಗುರುತಿಸಲಾಗಿದೆ. ಇವರು ಸಮೀಕ್ಷೆಯಲ್ಲಿ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥರನ್ನು ಸಂಪರ್ಕಿಸಿ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.  ಸಭೆಯಲ್ಲಿ ಭಾಗವಹಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರು ವಸತಿ ಸಮಸ್ಯೆಯ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಮಂಡ್ಯ ನಗರಸಭೆಯಲ್ಲಿ ನಿವೇಶನ ಹಾಗೂ ವಸತಿ ರಹಿತರ ಪಟ್ಟಿ ಸಿದ್ಧಪಡಿಸುತ್ತಿದ್ದು ಮಂಡ್ಯ ನಗರ ವ್ಯಾಪ್ತಿಯಲ್ಲಿ ಬರುವ ಲಿಂಗತ್ವ ಅಲ್ಪಸಂಖ್ಯಾತರು ನಗರಸಭೆಯ ಪಟ್ಟಿಯಲ್ಲಿ ಹೆಸರು ಸೇರಿಸಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.