ADVERTISEMENT

Union Budget 2025 | ಬಜೆಟ್‌ನಿಂದ ಅನುದಾನ ನಿರೀಕ್ಷೆಯಿಲ್ಲ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 12:40 IST
Last Updated 26 ಜನವರಿ 2025, 12:40 IST
ಚಲುವರಾಯ ಸ್ವಾಮಿ 
ಚಲುವರಾಯ ಸ್ವಾಮಿ    

ಮಂಡ್ಯ: ‘ಕೇಂದ್ರದ ಈ ಬಾರಿಯ ಬಜೆಟ್‌ನಲ್ಲೂ ರಾಜ್ಯಕ್ಕೆ ಅನುದಾನ ಸಿಗುವ ನಿರೀಕ್ಷೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ. ಈಗ ನಮಗೆ ಅನುದಾನ ಕೊಡುತ್ತಾರೆ ಎಂಬ ವಿಶ್ವಾಸವಿಲ್ಲ’ ಎಂದು ಕೃಷಿ ಎನ್‌.ಚಲುವರಾಯಸ್ವಾಮಿ ಹೇಳಿದರು. 

ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹16 ಸಾವಿರ ಕೋಟಿಯನ್ನು ಬಿಜೆಪಿಯವರು ಘೋಷಣೆ ಮಾಡಿದ್ದರು. ಅದನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕಳೆದ ಬಾರಿ ಬರಗಾಲದ ಪರಿಹಾರ ಕೇಳಿದ್ದೆವು. ಅವರು ಪರಿಹಾರ ಕೊಡಲಿಲ್ಲ. ನಾವು ಕೋರ್ಟ್ ಮೂಲಕ ಪರಿಹಾರ ಪಡೆದುಕೊಳ್ಳಬೇಕಾಯಿತು’ ಎಂದರು. 

‘ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಬೇಕು. ಯಾರೋ ಮಾಡಿದ್ದನ್ನು ನಾನು ಮಾಡಿದೆ ಅಂತಾರೆ. ಮಂಡ್ಯಕ್ಕೆ ವಿಶೇಷವಾಗಿ ಸಾವಿರ ಕೋಟಿ ರೂಪಾಯಿ ಅನುದಾನ ತರಬೇಕು. ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಬೇಕು. ಮೈಷುಗರ್‌ ಕಾರ್ಖಾನೆಗೆ ಕೇಂದ್ರದಿಂದ ₹500 ಕೋಟಿ ಕೊಡಿಸಲಿ. ನಾನೇ ಅಭಿನಂದನಾ ಸಮಾವೇಶ ಮಾಡಿ ಬೆಳ್ಳಿ ಗದೆ ಕೊಡ್ತೀನಿ. ನಾವು ಕೃಷಿ ವಿ.ವಿ.ಯನ್ನು ಮಂಡ್ಯಕ್ಕೆ ತಂದಿದ್ದೇವೆ. ಅದಕ್ಕೆ ಧನ್ಯವಾದ ಹೇಳುವ ಸೌಜನ್ಯ ಕುಮಾರಸ್ವಾಮಿಗೆ ಇಲ್ಲ’ ಎಂದು ಕುಟುಕಿದರು.

ADVERTISEMENT

ಜಿ.ಪರಮೇಶ್ವರ ಮುಂದಿನ ಮುಖ್ಯಮಂತ್ರಿ ಎಂಬ ಕೂಗಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಎಲ್ಲವೂ ಹೈಕಮಾಂಡ್ ನಿರ್ಧಾರ. ಮುಖ್ಯಮಂತ್ರಿ ಬದಲಾವಣೆ, ಅಧ್ಯಕ್ಷರ ಬದಲಾವಣೆ ಎಲ್ಲವನ್ನೂ ಮಲ್ಲಿಕಾರ್ಜುನ ಖರ್ಗೆ ಅವರೇ ತೀರ್ಮಾನ ಮಾಡ್ತಾರೆ. ಸಿ.ಎಂ. ಕೂಡ ನೇರವಾಗಿ ಹೇಳಿದ್ದಾರೆ. ಸಿ.ಎಂ. ಬದಲಾವಣೆ ಇಲ್ಲ’ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.