
ಶ್ರೀರಂಗಪಟ್ಟಣ: ತಾಲ್ಲೂಕಿನ ಕೋಡಿಶೆಟ್ಟಿಪುರ ಗ್ರಾಮದ ಬಳಿ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇ ನ ಸರ್ವೀಸ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಿವೆ ಎಂಬ ಹಿನ್ನೆಲೆಯಲ್ಲಿ ಮುಖಂಡರಾದ ರಾಮಲಿಂಗೇಗೌಡ, ದೇವರಾಜು ಇತರರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ಮಂಡ್ಯದಿಂದ ಮೈಸೂರಿಗೆ ಬರುವ ಮಾರ್ಗದಲ್ಲಿ, ಶಂಭುಲಿಂಗೇಶ್ವರಸ್ವಾಮಿ ದೇವಾಲಯದಿಂದ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ರಸ್ತೆ ತೀರಾ ಹಾಳಾಗಿದೆ. ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಷರ್‌ಗಳಿಂದ ಅತಿಯಾದ ಭಾರ ತುಂಬಿಕೊಂಡು ಬರುವ ವಾಹನಗಳ ಓಡಾಟದಿಂದ ರಸ್ತೆ ಅಧ್ವಾನವಾಗಿದೆ. ರಾಶಿಗಟ್ಟಲೆ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಬಿದ್ದಿವೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿದ್ದು ಅಪಘಾತಗಳು ನಡೆಯುತ್ತಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು ಸಾಕಷ್ಟು ಮಂದಿ ಅಂಗವಿಕಲರಾಗಿದ್ದಾರೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
‘ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬು ಇದ್ದು, ಸರಣಿ ಅಪಘಾತಗಳು ಘಟಿಸುತ್ತಿವೆ. ಸಮಸ್ಯೆ ಕುರಿತು ಸ್ಥಳೀಯ ಕಂದಾಯ, ಲೋಕೋಪಯೋಗಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.