ADVERTISEMENT

DYSPಗೆ ಕರ್ತವ್ಯದ ಪಾಠ ಕಲಿಸಿ: ಡಿಜಿಪಿ, ಐಜಿಪಿ, ಎಸ್ಪಿಗೆ ಉಪಲೋಕಾಯುಕ್ತ ಸೂಚನೆ

ಅಕ್ರಮ ಕ್ವಾರಿಯೊಳಗೆ ಟಿಪ್ಪರ್‌ ಚಾಲಕ ಸಾವು ಪ್ರಕರಣ: ಮಾರ್ಚ್‌ 17ರಂದು ವರದಿ ಸಲ್ಲಿಸಲು ಆದೇಶ

ಸಿದ್ದು ಆರ್.ಜಿ.ಹಳ್ಳಿ
Published 22 ಫೆಬ್ರುವರಿ 2026, 2:53 IST
Last Updated 22 ಫೆಬ್ರುವರಿ 2026, 2:53 IST
ನಾಗಮಂಗಲ ತಾಲ್ಲೂಕಿನ ವಡೇರಪುರ ಸಮೀಪದ ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಯೊಳಗೆ ಬಿದ್ದಿದ್ದ ಟಿಪ್ಪರ್‌ ಅನ್ನು ಕ್ರೇನ್‌ ನೆರವಿನಿಂದ ಮೇಲಕ್ಕೆತ್ತಿದ ದೃಶ್ಯ (ಸಂಗ್ರಹ ಚಿತ್ರ)
ನಾಗಮಂಗಲ ತಾಲ್ಲೂಕಿನ ವಡೇರಪುರ ಸಮೀಪದ ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಯೊಳಗೆ ಬಿದ್ದಿದ್ದ ಟಿಪ್ಪರ್‌ ಅನ್ನು ಕ್ರೇನ್‌ ನೆರವಿನಿಂದ ಮೇಲಕ್ಕೆತ್ತಿದ ದೃಶ್ಯ (ಸಂಗ್ರಹ ಚಿತ್ರ)   

ಮಂಡ್ಯ: ‘ಅಕ್ರಮ ಗಣಿಗಾರಿಕೆ ನಿಯಂತ್ರಿಸುವುದು ಪೊಲೀಸರ ಮುಖ್ಯ ಕರ್ತವ್ಯವಲ್ಲ’ ಎಂದು ಪ್ರತಿಕ್ರಿಯಿಸಿರುವ ನಾಗಮಂಗಲ ಡಿವೈಎಸ್ಪಿ ಚಲುವರಾಜು ಅವರ ಹೇಳಿಕೆಗೆ, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿವೈಎಸ್ಪಿಗೆ ಕರ್ತವ್ಯದ ಅರಿವು ಮೂಡಿಸಲು ಡಿಜಿಪಿ, ಐಜಿಪಿ ಮತ್ತು ಮಂಡ್ಯ ಎಸ್ಪಿಗೆ ಸೂಚಿಸಿದ್ದಾರೆ.

‘ಡಿವೈಎಸ್ಪಿ ವರ್ತನೆ ಮತ್ತು ಹೇಳಿಕೆ ನಿಯಮಬಾಹಿರವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಕ್ರಮ ಗಣಿಗಾರಿಕೆ ಕ್ವಾರಿಯೊಳಗೆ ಬಿದ್ದ ಟಿಪ್ಪರ್‌ ವಾಹನದ ನೋಂದಣಿ ಸಂಖ್ಯೆ ಮತ್ತು ಚಾಸಿಸ್‌ ನಂಬರ್‌ ಎರಡೂ ಹೊಂದಾಣಿಕೆಯಾಗುತ್ತಿಲ್ಲ. ಹೀಗಿದ್ದರೂ ಯಾವುದಾದರೂ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವ ಡಿವೈಎಸ್ಪಿ ಹೇಳಿಕೆ ದುರದೃಷ್ಟಕರ’ ಎಂದು ಉಪಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‌ಕರ್ನಾಟಕ ಸಣ್ಣ ಖನಿಜ ರಿಯಾಯಿತಿ (ಕೆ.ಎಂ.ಎಂ.ಸಿ) ನಿಯಮ 1994 ಮತ್ತು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಅಕ್ರಮ ಗಣಿಗಾರಿಕೆ ನಿಯಂತ್ರಿಸುವಲ್ಲಿ ಪೊಲೀಸರ (ಡಿವೈಎಸ್ಪಿ) ಪಾತ್ರವೇನು? ಎಂಬುದನ್ನು ಪೊಲೀಸ್‌ ಮಹಾನಿರ್ದೇಶಕರು ರಾಜ್ಯದ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಅರಿವು ಮೂಡಿಸಬೇಕು ಎಂದು ಉಪಲೋಕಾಯುಕ್ತರು ಆದೇಶಿಸಿದ್ದಾರೆ. 

ADVERTISEMENT

ಏನಿದು ಪ್ರಕರಣ?

ನಾಗಮಂಗಲ ತಾಲ್ಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯಲ್ಲಿರುವ ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಯೊಳಗೆ ಟಿಪ್ಪರ್ ವಾಹನ ಬಿದ್ದು ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 10 ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಜನವರಿ 6ರಂದು ಸ್ವಯಂಪ್ರೇರಿತ ದೂರು (ಸುಮೊಟೊ ಕೇಸ್‌) ದಾಖಲಿಸಿದ್ದರು. 

ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ’ ಎಂಬ ಆರೋಪದ ಮೇರೆಗೆ ಪಾಂಡವಪುರ ಉಪವಿಭಾಗಾಧಿಕಾರಿ, ನಾಗಮಂಗಲ ತಹಶೀಲ್ದಾರ್, ಡಿವೈಎಸ್ಪಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮತ್ತು ಹಿರಿಯ ಭೂ ವಿಜ್ಞಾನಿ, ಆರ್‌ಟಿಒ, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇನ್ಸ್‌ಪೆಕ್ಟರ್, ತಾಲ್ಲೂಕು ಪಂಚಾಯಿತಿ ಇಒ ಮತ್ತು ಪಿಡಿಒ ವಿರುದ್ಧ ದೂರು ದಾಖಲಾಗಿತ್ತು. 

ಡಿವೈಎಸ್ಪಿ ಪ್ರತಿಕ್ರಿಯೆ

‘ಕಲ್ಲು, ಮರಳು ಅಕ್ರಮ ಸರಕು ಸಾರಿಗೆಗಳ ಕುರಿತು ಪೊಲೀಸ್‌ ಇಲಾಖೆಗೆ ಸಂಜ್ಞೆಯ ಅಪರಾಧ ಪ್ರಕರಣಗಳಲ್ಲಿ ನೋಂದಣಿ ಮಾಡಿ, ವಾಹನ, ಖನಿಜಗಳನ್ನು ಜಪ್ತಿ ಮಾಡುವ ಅಧಿಕಾರ ನೀಡಲಾಗಿದ್ದರೂ, ಮೇಲ್ವಿಚಾರಣೆಗೆ ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಗಳೇ ಉತ್ತರದಾಯಿತ್ವ ಹೊಂದಿವೆ. ಹೀಗಾಗಿ ಗಣಿ– ಕಲ್ಲು ಕ್ವಾರಿಯ ತಾಂತ್ರಿಕ ಅನುಮತಿ, ಕಾರ್ಯಾಚರಣೆ, ಸುರಕ್ಷತಾ ಮಾನದಂಡಗಳ ಪಾಲನೆ ಮೇಲ್ವಿಚಾರಣೆ ಇತ್ಯಾದಿ ವಿಚಾರಗಳು ಮೂಲತಃ ಗಣಿಗಾರಿಕೆ ಮತ್ತು ಸಂಬಂಧಿತ ಇಲಾಖೆಗಳಿಗೆ ಸೇರಿದ ವಿಷಯವಾಗಿದೆ’ ಎಂದು ಡಿವೈಎಸ್ಪಿ ಚಲುವರಾಜು ಲೋಕಾಯುಕ್ತದಲ್ಲಿ ದಾಖಲಾದ ಸುಮೊಟೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದರು. 

‘ಕ್ವಾರಿಯೊಳಗೆ ವಾಹನ ಬಿದ್ದ ಘಟನೆಗೂ ಮುನ್ನ ಸುರಕ್ಷತಾ ಗೋಡೆಗಳಿಲ್ಲದಿರುವುದು, ಕಾರ್ಮಿಕರ ಜೀವ ಭದ್ರತೆಗೆ ಧಕ್ಕೆ ಮುಂತಾದ ವಿಷಯಗಳ ಬಗ್ಗೆ ನನಗೆ ಅಥವಾ ಉಪವಿಭಾಗದ ಯಾವುದೇ ಠಾಣೆಗೆ ಸಾರ್ವಜನಿಕರಿಂದ ಅಥವಾ ಇತರ ಅಧಿಕಾರಿಗಳಿಂದ ದೂರು ಬಂದಿರಲಿಲ್ಲ. ಗಣಿ ಸ್ಥಳಕ್ಕೆ ಪ್ರತಿದಿನ ಹೋಗಿ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವುದು ನನ್ನ ಹುದ್ದೆಯ ಕಾನೂನುಬದ್ಧ ಕರ್ತವ್ಯವಲ್ಲ’ ಎಂದು ಡಿವೈಎಸ್ಪಿ ಉತ್ತರಿಸಿದ್ದರು. 

‘ಅಕ್ರಮ ಕ್ವಾರಿಯೊಳಗೆ ಟಿಪ್ಪರ್‌ ವಾಹನ ಬಿದ್ದು ಚಾಲಕ ಸಾವು’ ಪ್ರಕರಣದಲ್ಲಿ ಇದುವರೆಗೂ ಕೈಗೊಂಡಿರುವ ಕ್ರಮಗಳ ಕುರಿತು ವರದಿಯನ್ನು ಮಾರ್ಚ್‌ 17ರಂದು ಖುದ್ದಾಗಿ ಬಂದು ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಉಪಲೋಕಾಯುಕ್ತ–2 ಬಿ.ವೀರಪ್ಪ ಅವರು ಆದೇಶಿಸಿದ್ದಾರೆ. 

‘₹32 ಲಕ್ಷ ಪರಿಹಾರ’

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಂಡ್ಯದ ಹಿರಿಯ ಭೂವಿಜ್ಞಾನಿ ಪುಷ್ಪಾ ಅವರು ‘ಕ್ವಾರಿ ಮಾಲೀಕ ಕಾಂತರಾಜು ಸರ್ವೆ ನಂ.11/6ಬಿ ನಲ್ಲಿ 20 ವರ್ಷಗಳ ಅವಧಿಗೆ ಗಣಿ ಗುತ್ತಿಗೆ ಪಡೆದಿದ್ದಾರೆ. ಅಲ್ಲಿ ಸುರಕ್ಷತಾ ತಡೆಗೋಡೆ ದೂಳು ನಿಯಂತ್ರಿಸಲು ಜಿಐ ಶೀಟು ಅಳವಡಿಕೆ ಮಾಡಿರಲಿಲ್ಲ. ಗುತ್ತಿಗೆದಾರ ₹32 ಲಕ್ಷ ಪರಿಹಾರವನ್ನು ಮೃತ ಚಾಲಕನ ಪತ್ನಿಗೆ ನೀಡಲು ಒಪ್ಪಿದ್ದು ಈಗಾಗಲೇ ₹5 ಲಕ್ಷ ಪರಿಹಾರ ನೀಡಿದ್ದಾರೆ’ ಎಂದು ಉಪಲೋಕಾಯುಕ್ತರಿಗೆ ವರದಿ ನೀಡಿದ್ದಾರೆ.

‘ಗಣಿ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ದಂಡ ವಸೂಲಾತಿ ಮಾಡುತ್ತೇವೆ’ ಎಂದು ಪುಷ್ಪಾ ಅವರು ತಿಳಿಸಿದ್ದಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಕೂಡ ಇಲಾಖೆಯಿಂದ ಮೃತ ಚಾಲಕನ ಪತ್ನಿಗೆ ₹5 ಲಕ್ಷ ಪರಿಹಾರ ನೀಡಲು ಮೇಲಧಿಕಾರಿಗೆ ಪ್ರಸ್ತಾವ ಕಳುಹಿಸಿದ್ದಾರೆ. 

‘ಎಷ್ಟು ವಾಹನ ತಪಾಸಣೆ ಮಾಡಿದ್ದೀರಿ?’

‘ಎರಡು ವರ್ಷಗಳಲ್ಲಿ ನಾಗಮಂಗಲ ಉಪವಿಭಾಗದಲ್ಲಿ ಎಷ್ಟು ಪೊಲೀಸ್‌ ಅಧಿಕಾರಿಗಳನ್ನು ಸಣ್ಣ ಖನಿಜ ಸಾಗಾಣಿಕೆ ವಾಹನಗಳನ್ನು ತಪಾಸಣೆ ಮಾಡಲು ನಿಯೋಜಿಸಿದ್ದೀರಿ? ಕೆ.ಎಂ.ಎಂ.ಸಿ ನಿಯಮದ ಪ್ರಕಾರ ಎಷ್ಟು ವಾಹನಗಳನ್ನು ತಪಾಸಣೆ ಮಾಡಿದ್ದೀರಿ? ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ನಾಗಮಂಗಲ ಡಿವೈಎಸ್ಪಿ ಚಲುವರಾಜು ಅವರಿಗೆ ಆದೇಶಿಸಿದ್ದಾರೆ.

‘ನಿಯಮ ಉಲ್ಲಂಘಿಸಿ ಎಷ್ಟು ವಾಹನಗಳು ಕಲ್ಲು–ಮರಳು ಸಾಗಾಣಿಕೆ ಮಾಡಿವೆ? ಜಿಪಿಎಸ್‌ ಮತ್ತು ಅಗತ್ಯ ದಾಖಲೆಗಳು ಇಲ್ಲದೇ ಎಷ್ಟು ವಾಹನಗಳು ಸಂಚರಿಸಿವೆ? ಒಟ್ಟಾರೆ 2 ವರ್ಷಗಳಲ್ಲಿ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಎಷ್ಟು ಕಲ್ಲು ಮತ್ತು ಮರಳನ್ನು ಜಪ್ತಿ ಮಾಡಿದ್ದೀರಿ’ ಎಂಬ ವಿವರ ನೀಡಲು ಸೂಚಿಸಿದ್ದಾರೆ. 

ಎಸಿ ತಹಶೀಲ್ದಾರ್‌ಗೆ ಷೋಕಾಸ್‌ ನೋಟಿಸ್‌

‘ಅಕ್ರಮ ಕ್ವಾರಿಯೊಳಗೆ ಟಿಪ್ಪರ್‌ ವಾಹನ ಬಿದ್ದು ಚಾಲಕ ಸಾವು’ ಪ್ರಕರಣದ ವಿಚಾರಣೆಗೆ ಗೈರು ಹಾಜರಾದ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್‌ ಮತ್ತು ನಾಗಮಂಗಲ ತಹಶೀಲ್ದಾರ್‌ ಜಿ.ಆದರ್ಶ ಅವರಿಗೆ ಉಪಲೋಕಾಯುಕ್ತರು ಷೋಕಾಸ್‌ ನೋಟಿಸ್‌ ನೀಡಿದ್ದಾರೆ.

‘ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯಲ್ಲಿರುವ ಸದಸ್ಯರಿಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಾನೂನುಬದ್ಧವಾಗಿ ನಿರ್ವಹಿಸುವಂತೆ ಸೂಚಿಸಬೇಕು. ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಎಸಿ ಅವರಿಂದ ತನಿಖಾ ವರದಿ ಸಲ್ಲಿಸಬೇಕು’ ಎಂದು ಕಾರ್ಯಪಡೆ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಕುಮಾರ ಅವರಿಗೆ ಉಪಲೋಕಾಯುಕ್ತರು ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.