ADVERTISEMENT

ವಿಧಾನ ಪರಿಷತ್‌: ಎಸ್‌ ಟಿ ಸೋಮಶೇಖರ್‌ ಆಪ್ತನಿಗೆ ಕಾಂಗ್ರೆಸ್‌ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 12:44 IST
Last Updated 18 ನವೆಂಬರ್ 2021, 12:44 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಮಂಡ್ಯ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್‌ ಗೂಳಿಗೌಡ ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡುವುದು ಖಚಿತವಾಗಿದೆ.

ಟಿಕೆಟ್‌ ಹಂಚಿಕೆ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ದಿನೇಶ್‌ ಹೆಸರು ಅಂತಿಮಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಮಾಜಿ ವಿಧಾನ ಪರಿಷತ್‌ ಸದಸ್ಯ ಬಿ.ರಾಮಕೃಷ್ಣ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಕಡೆ ಕ್ಷಣದಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ದಿನೇಶ್‌ ಗೂಳಿಗೌಡ ಅವರ ಹೆಸರು ಅಂತಿಮಗೊಂಡಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮದ್ದೂರು ತಾಲ್ಲೂಕು ಮಾರಸಿಂಗನಹಳ್ಳಿ ಮೂಲದ ದಿನೇಶ್‌ ಕೆಪಿಸಿಸಿ ಕಚೇರಿಯಲ್ಲಿ ಹಲವು ವರ್ಷ ಮಾಧ್ಯಮ ಕೇಂದ್ರದ ಮುಖ್ಯಸ್ಥರಾಗಿದ್ದರು. ಎಸ್‌.ಎಂ.ಕೃಷ್ಣ ಅವರಿಗೆ ಆಪ್ತ ಸಹಾಯಕರಾಗಿಯೂ ಕೆಲಸ ಮಾಡಿದ್ದರು. ಡಾ.ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಸಂವಹನಾಧಿಕಾರಿಯಾಗಿದ್ದರು. ಪರಮೇಶ್ವರ ಅವರು ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ವಿಶೇಷ ಕರ್ತವ್ಯಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು.

ADVERTISEMENT

ಸೋಮಶೇಖರ್‌ ಬಿಜೆಪಿಗೆ ತೆರಳಿ ಸಚಿವರಾದ ನಂತರ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಕೆಪಿಸಿಸಿಯಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಮದ್ದೂರು ಮೂಲದ ಆಧಾರದ ಮೇಲೆ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

‘1999ರಿಂದ 2015ರವರೆಗೂ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಉಸ್ತುವಾರಿ ನೋಡಿಕೊಂಡಿದ್ದೇನೆ. ರೈತ ಕುಟುಂಬದಿಂದ ಬಂದ ನನಗೆ ಕಾಂಗ್ರೆಸ್‌ ವರಿಷ್ಠರು ಅವಕಾಶ ನೀಡಿರುವುದು ಸಂತಸ ತಂದಿದೆ’ ಎಂದು ದಿನೇಶ್‌ ಗೂಳಿಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.