ADVERTISEMENT

ಚುಂಚನಗಿರಿ ಮಠ, ವಿಶ್ವ ಒಕ್ಕಲಿಗರ ಮಠ ವಿಶ್ವಮಾನವ ಪ್ರಜ್ಞೆ ಹೊಂದಿವೆ: ಸ್ವಾಮೀಜಿ

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:30 IST
Last Updated 11 ಫೆಬ್ರುವರಿ 2026, 7:30 IST
ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲ್ಲೂಕಿನ ಸರ್ವ ಸಮಾಜದ ಸದ್ಭಕ್ತರು ಆಯೋಜಿಸಿದ್ದ ಭೈರವೈಕ್ಯ ಗುರುಗಳಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯ ಸಂಸ್ಮರಣೆ ಮತ್ತು ನಿಶ್ಚಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು 
ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲ್ಲೂಕಿನ ಸರ್ವ ಸಮಾಜದ ಸದ್ಭಕ್ತರು ಆಯೋಜಿಸಿದ್ದ ಭೈರವೈಕ್ಯ ಗುರುಗಳಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯ ಸಂಸ್ಮರಣೆ ಮತ್ತು ನಿಶ್ಚಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು    

ಕೆ.ಆರ್.ಪೇಟೆ: ಧರ್ಮದ ಹಾದಿಯಲ್ಲಿ ಸರ್ವಜನಾಂಗದ ಹಿತವನ್ನು ಬಯಸುವ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಹಿರಿಯ ಶ್ರೀಗಳ ಮಾರ್ಗದರ್ಶನದಂತೆ ಸನ್ಯಾಸತ್ವ ಸ್ವೀಕರಿಸಿರುವೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ತಾಲ್ಲೂಕಿನ ಸರ್ವ ಸಮಾಜದ ಸದ್ಭಕ್ತರು ಆಯೋಜಿಸಿದ್ದ ಭೈರವೈಕ್ಯ ಗುರುಗಳಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳ ಸಂಸ್ಮರಣೆ, ತಾಲ್ಲೂಕಿನ ಸಮಸ್ತ ನಾಗರಿಕರಿಂದ ಗುರುವಂದನೆ ಮತ್ತು ಪೌರಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೈರವೈಕ್ಯ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಈ ಮೊದಲೇ ನನಗೆ ಇಟ್ಟಿದ್ದ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿಯೇ ಧೀಕ್ಷೆ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿರುವೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಗಳೆರಡು ಕೇವಲ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗಿರುವ ಮಠಗಳಲ್ಲ. ಈ ಎರಡು ಮಠಗಳು ವಿಶ್ವಮಾನವ ಪ್ರಜ್ಞೆ ಹೊಂದಿರುವ ನಾಡಿನ ಶ್ರೇಷ್ಠ ಮಠಗಳಾಗಿವೆ. ನಾನು ಸನ್ಯಾಸತ್ವ ದೀಕ್ಷೆ ಸ್ವೀಕರಿಸುವ ಮುನ್ನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರನ್ನು ಭೇಟಿ ಮಾಡಿ ನನ್ನ ಸನ್ಯಾಸತ್ವ ದೀಕ್ಷಾ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿದೆ. ಕಾರ್ಯಕ್ರಮಕ್ಕೆ ಬರಲು ಸಮ್ಮತಿಸಿದ ನಿರ್ಮಲಾನಂದನಾಥರು ನಮ್ಮ ನಮ್ಮ ನಡುವೆ ಪೈಪೋಟಿ ನಡೆಸುವುದು ಬೇಡ. ಪ್ರೀತಿ ವಿಶ್ವಾಸದಿಂದ ಸಮಾಜವನ್ನು ಕಟ್ಟೋಣ ಎಂದು ಸೂಚಿಸಿದರು. ಅದರಂತೆ ಸಂಕಲ್ಪ ಮಾಡಿ, ಪ್ರೀತಿ ವಿಶ್ವಾಸದಿಂದ, ನಂಬಿಕೆ ಹಾಗೂ ಭಕ್ತಿಯಿಂದ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ಎಂದರು.

ADVERTISEMENT

ಕೆ.ಆರ್.ಪೇಟೆ ಪಟ್ಟಣದವರೇ ಆದ ಭೈರವೈಕ್ಯ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ನೆನಪಿಗಾಗಿ ಪಟ್ಟಣದ ಒಂದು ಮುಖ್ಯ ರಸ್ತೆಗೆ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಹೆಸರಿಡಬೇಕು ಮತ್ತು ಪುರಸಭೆಯು ನಿವೇಶನವನ್ನು ನೀಡಿದರೆ ಗುರುಗಳ ಹೆಸರಿನಲ್ಲಿ ಒಂದು ಯೋಗ ಭವನವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದೇವೆ. ಈ ಕಾರ್ಯಕ್ಕೆ ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.

ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠವು ಚೈತನ್ಯ ಶೀಲವಾಗಿದೆ. ಶ್ರಮಿಕ ವರ್ಗದ ಮಠವಾಗಿದ್ದು, ನಾಥ ಪರಂಪರೆಯ ಸಾಂಪ್ರದಾಯಗಳನ್ನು ನಾಡಿಗೆ ಸಂದೇಶವಾಗಿ ನೀಡುತ್ತಿದೆ. ನಿಶ್ಚಲಾನಂದನಾಥರು ಪೂರ್ವಾಶ್ರಮದಲ್ಲಿ ತಹಶೀಲ್ದಾರರಾಗಿ, ಉಪ ವಿಭಾಗಾಧಿಕಾರಿಯಾಗಿ, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದು, ಅದೇ ಕರ್ತವ್ಯ ನಿಷ್ಠೆಯನ್ನು ಮಠದ ಪೀಠಾಧಿಪತಿಯಾದ ನಂತರವೂ ಮುಂದುವರಿಸಿದ್ದು, ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನು ಜಿಲ್ಲೆಯ ಸಮಸ್ತ ನಾಗರಿಕರು ಕೊಡಬೇಕೆಂದು ಮನವಿ ಮಾಡಿದರು.

ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಮಾಜಿ ಶಾಸಕ ಬಿ. ಪ್ರಕಾಶ್, ಪ್ರಮುಖರಾದ ನಾಯಕನಹಳ್ಳಿ ಬಿ.ನಂಜಪ್ಪ, ವಿಠಲಾಪುರ ಸುಬ್ಬೇಗೌಡ, ಆರ್‌ಟಿಒ ಮಲ್ಲಿಕಾರ್ಜುನ, ಬಿ.ಎಲ್.ದೇವರಾಜು, ಬಸ್ ಸಂತೋಷಕುಮಾರ್, ಬೂಕನಕೆರೆ ವಿಜಯ್ ರಾಮೇಗೌಡ, ಎಸ್.ಎಲ್. ಮೋಹನ್, ಶೀಳನೆರೆ ಅಂಬರೀಶ್, ಬಲದೇವ್, ಎ.ಬಿ.ಕುಮಾರ್, ರಾಜೇನಹಳ್ಳಿ ರೇವಣ್ಣ, ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಕೆ. ಆರ್.ನಂದಿನಿಜಯರಾಮು, ಮರುವನಹಳ್ಳಿ ಶಂಕರ್, ಕೆ.ಕಾಳೇಗೌಡ, ಹರಿಚರಣ್ ತಿಲಕ್ ,ಕೆ.ಆರ್. ನೀಲಕಂಠ, ಬಳ್ಳೇಕೆರೆ ಮಂಜುನಾಥ್,ಕತ್ತರ ಘಟ್ಟ ವಾಸು, ಬಲ್ಲೇನಹಳ್ಳಿ ಮಂಜುನಾಥ್ , ಬಿ.ಸಿ.ಎಸ್. ಕುಮಾರ್, ಪದ್ಮೇಶ್, ಪೂರ್ಣಚಂದ್ರ ತೇಜಸ್ವಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಎಸ್.ಯು. ಅಶೋಕ್ ಕುಮಾರ್ , ಧರ್ಮಸ್ಥಳ ಯೋಜನೆಯ ಯೋಗೀಶ್ ಇದ್ದರು. 

ಇದಕ್ಕೂ ಮುನ್ನ ಪ್ರವಾಸಿಮಂದಿರ ವೃತ್ತದಿಂದ ಅಲಂಕರಿಸಿದ್ದ ಬೆಳ್ಳಿ ಸಾರೋಟಿನಲ್ಲಿದ್ದ ನಿಶ್ಚಲಾನಂದನಾಥ ಸ್ವಾಮೀಜಿಯವರು ಕುಳಿತಿದ್ದ ವಾಹನವನ್ನು ಶಾಸಕ ಎಚ್.ಟಿ. ಮಂಜು ಚಲಾಯಿಸಿಕೊಂಡು ಸಮಾರಂಭದ ವೇದಿಕೆಗೆ ಕರೆತಂದರು. ವೈವಿದ್ಯಮಯ , ಜಾನಪದ ಕಲಾತಂಡಗಳ ಮೆರವಣಿಗೆ ಮತ್ತು ಸುಮಂಗಲಿಯರು ಪೂರ್ಣಕುಂಬದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಆಗಮಿಸಿದ್ದವರಿಗೆಲ್ಲಾ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ ಪರವಾಗಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು ಸನ್ಮಾನ ಮಾಡಿ ಗೌರವ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.