ADVERTISEMENT

ಶ್ರೀರಂಗಪಟ್ಟಣ: ಕರಿಘಟ್ಟಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ನಾಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 13:51 IST
Last Updated 13 ಮಾರ್ಚ್ 2022, 13:51 IST
ಕರಿಘಟ್ಟಕ್ಕೆ ಹಾನಿಯಾಗಿರುವುದು
ಕರಿಘಟ್ಟಕ್ಕೆ ಹಾನಿಯಾಗಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರಕೃತಿ ತಾಣ ಕರಿಘಟ್ಟ ಗುಡ್ಡಕ್ಕೆ ಭಾನುವಾರ ನಾಲ್ಕೂ ಕಡೆಗಳಿಂದ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಹೋಗಿದೆ.

ಕುದುರೆ ಕಲ್ಲು ಗುಡ್ಡ, ಅಲ್ಲಾಪಟ್ಟಣ ಗಡಿ, ಸಿಡಿಎಸ್‌ ನಾಲೆ ಗಡಿ, ಶಿಖರ ಭಾಗದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಧ ದಿನ ಉರಿಯುತ್ತಲೇ ಇತ್ತು. ಬಿಸಿಲಿನ ತಾಪ ಮತ್ತು ಗಾಳಿ ಬೀಸಿದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದರು. ಒಂದು ಕಡೆ ಬೆಂಕಿ ನಂದಿಸಿದರೆ ಮತ್ತೊಂದು ಕಡೆ ಬೆಂಕಿ ಹರಡುತ್ತಲೇ ಇತ್ತು. ಬೆಂಕಿ ರೇಖೆ ದಾಟಿಕೊಂಡು ಬೆಂಕಿ ಮುನ್ನುಗ್ಗುತ್ತಿತ್ತು.

ಕರಿಘಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರಿಯರು ನೆಟ್ಟಿ ಬೆಳೆಸುತ್ತಿದ್ದ ಬಗೆ ಬಗೆಯ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋದವು. ಪ್ರಾಣಿ, ಪಕ್ಷಿಗಳು ಜೀವ ಕಳೆದುಕೊಂಡಿವೆ ಎಂದು ಅರಣ್ಯದ ಪಕ್ಕದ ನಿವಾಸಿಗಳು ಹೇಳಿದ್ದಾರೆ. ಕರಿಘಟ್ಟ ಗುಡ್ಡದಲ್ಲಿ ಉರಿಯುತ್ತಿದ್ದ ಬೆಂಕಿ ಮತ್ತು ಅದರ ಹೊಗೆ ನಾಲ್ಕಾರು ಮೈಲು ದೂರದ ವರೆಗೂ ವ್ಯಾಪಿಸಿತ್ತು.

ADVERTISEMENT

‘ಪ್ರತಿ ವರ್ಷ ಕರಿಘಟ್ಟ ಗುಡ್ಡಕ್ಕೆ ಬೆಂಕಿ ಬೀಳುತ್ತಲೇ ಇದೆ. ಬೆಂಕಿ ಬೀಳುವುದನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ವಹಿಸಬೇಕು. ಇಲ್ಲಿದ್ದರೆ ಅಪರೂಪದ ನವ್ಯ ಸಂಪತ್ತು ನಾಶವಾಗುತ್ತಲೇ ಇರುತ್ತದೆ’ ಎಂದು ಪಕ್ಕದ ಶ್ರೀನಿವಾಸ ಅಗ್ರಹಾರದ ಎಸ್‌. ಶ್ರೀನಾಥ್‌ ಕಳವಳ ವ್ಯಕ್ತಪಡಿಸಿದರು.

‘ಘಟನೆಗೆ ಕಿಡಿಗೇಡಿಗಳ ಕೃತ್ಯವೇ ಕಾರಣ, ಈ ಬಗ್ಗೆ ತನಿಖೆ ನಡೆಸಲಾಗುವುದು. ಹುಲ್ಲು ಜಾಸ್ತಿ ಇದ್ದ ಕಾರಣ ಬೆಂಕಿ ಎಲ್ಲಾ ಕಡೆ ವ್ಯಾಪಿಸಿಕೊಂಡಿದೆ. ಸದ್ಯ ಬೆಂಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಂದಿಸಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.