ADVERTISEMENT

ನಾಗಮಂಗಲ: ಯುವಕನ ಕೈಹಿಡಿದ ಸಮಗ್ರ ಕೃಷಿ

6 ಎಕರೆ ಜಮೀನಿನಲ್ಲಿ ಬಿಳಿ ರಾಗಿ, ಬಾಸುಮತಿ ಭತ್ತ, ಬೆಳ್ಳುಳ್ಳಿ, ಈರುಳ್ಳಿ ಬೆಳೆಯುತ್ತಿರುವ ಯುವ ರೈತ

ಉಲ್ಲಾಸ್.ಯು.ವಿ
Published 28 ಫೆಬ್ರುವರಿ 2025, 7:19 IST
Last Updated 28 ಫೆಬ್ರುವರಿ 2025, 7:19 IST
ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ನಿರತರಾಗಿದ್ದ ಬಿ.ಕೆ.ಯೋಗೇಶ್
ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ನಿರತರಾಗಿದ್ದ ಬಿ.ಕೆ.ಯೋಗೇಶ್   

ನಾಗಮಂಗಲ: ಪದವಿ ಮುಗಿಸಿ ಉದ್ಯೋಗದ ಆಸೆ ಬಿಟ್ಟ, ತಾಲ್ಲೂಕಿನ ದೇವಲಾಪುರ ಹೋಬಳಿಯ ಬಿಂಡೇನಹಳ್ಳಿಯ ಯುವ ರೈತ ಬಿ.ಕೆ.ಯೋಗೇಶ್ ಸಮಗ್ರ ಕೃಷಿಯಲ್ಲಿ ತೊಡಗಿ ಯಶಸ್ಸು ಕಾಣುತ್ತಿದ್ದಾರೆ.

ಬಿಬಿಎ ಪದವೀಧರರಾದ ಯೋಗೇಶ್‌ ಬಾಲ್ಯದಿಂದಲೂ ತಂದೆ ಮಾಡುತ್ತಿದ್ದ ಕೃಷಿ ಚಟುವಟಿಕೆಯನ್ನು ಹತ್ತಿರದಿಂದ ಕಂಡಿದ್ದರು. ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಗ್ರಾಮದಲ್ಲಿರುವ 6 ಎಕರೆ ಜಮೀನಿನಲ್ಲಿ ಬಿಳಿ ರಾಗಿ ಸೇರಿದಂತೆ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವ ಜೊತೆಗೆ ಉಪ ಕಸುಬು ಮಾಡುವ ಮೂಲಕ ವಾರ್ಷಿಕ ₹12 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಆರಂಭದಲ್ಲಿ ರಾಗಿ, ಹುರುಳಿ ಮತ್ತು ಎಳ್ಳು ಬೆಳೆಗಳಿಗೆ ಸೀಮಿತವಾಗಿದ್ದ ಇವರು, ರಾಜ್ಯದ ವಿವಿಧೆಡೆಗಳಲ್ಲಿ ಕೃಷಿ ತರಬೇತಿ, ಶಿಬಿರಗಳು, ಕಾರ್ಯಾಗಾರ, ಕೃಷಿ ಮೇಳಗಳಲ್ಲಿ ಭಾಗವಹಿಸಿ ತಂತ್ರಜ್ಞಾನಾಧಾರಿತ ಮತ್ತು ವೈವಿಧ್ಯಮಯ ಕೃಷಿ ಪದ್ಧತಿ ಬಗ್ಗೆ ತಿಳಿದುಕೊಂಡರು. ಇದನ್ನು ತಮ್ಮ ಜಮೀನಿನಲ್ಲೂ ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಕೃಷಿಯಲ್ಲಿ ಗೆಲುವು ಕಂಡಿದ್ದಾರೆ.

ADVERTISEMENT

ಬಿಳಿ ರಾಗಿಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಬಾಸುಮತಿ ಭತ್ತ, ನಾಟಿ ಬೆಳ್ಳುಳ್ಳಿ, ರಾಜ ಈರುಳ್ಳಿ (ನಾಟಿ ಈರುಳ್ಳಿ), ಕುಂಬಳಕಾಯಿ, ಕೋಸು, ಅಜೋಲ ಬೆಳೆಯುತ್ತಾರೆ. ಜಮೀನಿನಲ್ಲಿ ಒಂದು ಭಾಗದಲ್ಲಿ ಕೀರೆ, ದಂಟು, ಕೊತ್ತಂಬರಿ, ಪಾಲಕ್ ಸೊಪ್ಪನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಹೈನುಗಾರಿಕೆ, ಜೇನು, ಕೋಳಿ, ಕುರಿ ಸಾಕಣೆ, ಸಾವಯವ ಗೊಬ್ಬರ ತಯಾರಿಕೆ, ಅಡಿಕೆ ಸಸಿಗಳನ್ನು ಬೆಳೆಸಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.

‘ಬಹುತೇಕ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಷ್ಟ ಅನುಭವಿಸುತ್ತಾರೆ. ಆದರೆ,  ಬಿ.ಕೆ.ಯೋಗೇಶ್ ಕೃಷಿಯಲ್ಲಿ ಹೊಸತನ ಮತ್ತು ವೈವಿಧ್ಯತೆಯನ್ನು ಅಳವಡಿಸಿಕೊಂಡು ಕೃಷಿ ಲಾಭದಾಯಕ ಎಂಬುದನ್ನು ತೋರಿಸಿದ್ದಾರೆ’ ಎಂದು ಗ್ರಾಮದ ರೈತ ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಳಿ ರಾಗಿ ಬೆಳೆದಿರುವ ಬಿ.ಕೆ.ಯೋಗೇಶ್
ಜೇನು ಸಾಕಣೆ
ಬಿಬಿಎ ಪದವೀಧರರಾದ ಯೋಗೇಶ್‌ ಕೃಷಿಯಿಂದ ವಾರ್ಷಿಕ ₹12 ಲಕ್ಷ ಆದಾಯ ಹೈನುಗಾರಿಕೆ, ಜೇನು, ಕೋಳಿ, ಕುರಿ ಸಾಕಣೆ
‘ಕೃಷಿಯಲ್ಲಿ ನೆಮ್ಮದಿ’
‘ಅನೇಕ ಯುವಕರು ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಾರೆ. ಉದ್ಯೋಗ ಗಿಟ್ಟಿಸಿಕೊಂಡರೂ ಬೇರೆಯವರ ಕೈಕೆಳಗೆ ದುಡಿಯುವ ಜೊತೆಗೆ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಕಾಯುತ್ತಾರೆ. ರೈತರ ಮಕ್ಕಳಾಗಿರುವ ನಮಗೆ ಅದು ಶೋಭಿಸುವುದಿಲ್ಲ. ಹಾಗಾಗಿ ಕೃಷಿಯಲ್ಲಿ ತೊಡಗಿದ್ದು ನೆಮ್ಮದಿ ಸಿಕ್ಕಿದೆ’ ಎಂದು ಬಿ.ಕೆ.ಯೋಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.