ADVERTISEMENT

ನಾಗಮಂಗಲ: ಜಿಲೆಟಿನ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
ರಾಮಚಂದ್ರ
ರಾಮಚಂದ್ರ   

ನಾಗಮಂಗಲ ( ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ್ದ ಬಾಲಕಿಯ ಮನೆ ಮುಂದೆಯೇ ಜಿಲೆಟಿನ್‌ ಕಡ್ಡಿ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲ್ಲೂಕಿನ ಹೊನಕೆರೆ ಹೋಬಳಿಯ ಬಸವೇಶ್ವರ ನಗರ ನಿವಾಸಿ ರಾಮಚಂದ್ರ (21) ಮೃತ ಯುವಕ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ಈತ ಮೃತಪಟ್ಟಿದ್ದು, ಸ್ಫೋಟದ ತೀವ್ರತೆಗೆ ಹೊಟ್ಟೆಯ ಭಾಗ ಛಿದ್ರವಾಗಿದೆ. 

‘ವರ್ಷದ ಹಿಂದೆ ರಾಮಚಂದ್ರ ಕಾಳೇನಹಳ್ಳಿಯ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆಕೆ ಅಪ್ರಾಪ್ತ ವಯಸ್ಕಳಾದ ಕಾರಣ ಪ್ರಕರಣವು ಠಾಣೆ ಮೆಟ್ಟಿಲೇರಿದ್ದು, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಮೂರು ತಿಂಗಳು ಜೈಲು ವಾಸದ ಬಳಿಕ ಆತ ಬಿಡುಗಡೆ ಆಗಿದ್ದು, ಬಳಿಕ ಕುಟುಂಬಗಳ ರಾಜಿ ಸಂಧಾನದೊಂದಿಗೆ ಪ್ರಕರಣ ಅಂತ್ಯವಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ ಕೆಲ ವಾರದಿಂದ ಖಿನ್ನತೆಗೆ ಒಳಗಾಗಿದ್ದ ರಾಮಚಂದ್ರ, ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನೋವು ತೋಡಿಕೊಂಡಿದ್ದ. ಭಾನುವಾರ  ಬೆಳಿಗ್ಗೆ 3.30ರ ಸುಮಾರಿಗೆ ಬಾಲಕಿ ಮನೆ ಬಳಿಗೆ ತೆರಳಿದ್ದು, ಆತ್ಮಹತ್ಯೆಗೂ ಮುನ್ನ ಮನೆಯ ಗೋಡೆ ಮೇಲೆ ‘ನನ್ನ ಹುಚ್ಚು ಪ್ರೇಮ’ ಎಂದು ಬರೆದಿದ್ದಾನೆ. ಬಳಿಕ  ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ಶಬ್ದದಿಂದ ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳ ಪರಿಶೀಲನೆ ನಡೆಸಿದರು. ‘ಯುವಕನಿಗೆ ಜಿಲೆಟಿನ್‌ ದೊರೆತಿದ್ದರ ಕುರಿತು ತನಿಖೆ ನಡೆಸಲಾಗುವುದು’ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿತ್ತು. ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.