ADVERTISEMENT

ಮೈಸೂರು: ಜಾತಿ ಗಣತಿ ವರದಿ ಬಿಡುಗಡೆಗೆ ದಲಿತ ಸಂಘರ್ಷ ಸಮಿತಿ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 14:01 IST
Last Updated 26 ನವೆಂಬರ್ 2023, 14:01 IST
<div class="paragraphs"><p>ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ 74ನೇ ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಜನತಂತ್ರ ವ್ಯವಸ್ಥೆಯಲ್ಲಿ ಜನಗಣತಿಯ ಅನಿವಾರ್ಯತೆ’ ಕುರಿತು ವಿಚಾರಸಂಕಿರಣದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿದರು. </p></div>

ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ 74ನೇ ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಜನತಂತ್ರ ವ್ಯವಸ್ಥೆಯಲ್ಲಿ ಜನಗಣತಿಯ ಅನಿವಾರ್ಯತೆ’ ಕುರಿತು ವಿಚಾರಸಂಕಿರಣದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿದರು.

   

-ಪ್ರಜಾವಾಣಿ ಚಿತ್ರ

ಮೈಸೂರು: ‘ರಾಜ್ಯ ಸರ್ಕಾರವು ಎಚ್‌.ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ADVERTISEMENT

ಸಮಿತಿಯು ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 74ನೇ ಸಂವಿಧಾನ ದಿನಾಚರಣೆ ಹಾಗೂ ‘ಜನತಂತ್ರ ವ್ಯವಸ್ಥೆಯಲ್ಲಿ ಜನಗಣತಿಯ ಅನಿವಾರ್ಯತೆ’ ಕುರಿತ ವಿಚಾರಸಂಕಿರಣದಲ್ಲಿ ಹಕ್ಕೊತ್ತಾಯವನ್ನು ಮಂಡಿಸಲಾಯಿತು.

ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಕಾರ್ಯದರ್ಶಿ ಆರ್. ಮಹದೇವಪ್ಪ, ‘ಜಾತಿ ಕಾರಣಕ್ಕಾಗಿ ಒಂದೆಡೆ ಎಲ್ಲವನ್ನೂ ‍ಪಡೆದುಕೊಳ್ಳುತ್ತಿರುವುದು ಹಾಗೂ ಇನ್ನೊಂದೆಡೆ ನಿರ್ಲಕ್ಷ್ಯ–ಅವಮಾನ ಅನುಭವಿಸುತ್ತಾ ಇರುವವರು ನಮ್ಮ ಸಮಾಜದಲ್ಲಿ ಬಹಳಷ್ಟಿದ್ದಾರೆ. ಯೋಜನೆ ರೂಪಿಸಲು ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ತಿಳಿದಿರಬೇಕಾಗುತ್ತದೆ. ಸೌಲಭ್ಯ ಒದಗಿಸುವುದಕ್ಕೂ ಅದು ಮಹತ್ವದ್ದಾಗಿದೆ. ಆದ್ದರಿಂದ ಗಣತಿ ಅತ್ಯಂತ ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಸಾಂಸ್ಕೃತಿಕ ಕ್ರಾಂತಿಯಾಗಬೇಕು: ‘ಜಾತಿ ಜನಗಣತಿ ಅನಿವಾರ್ಯ ಎಂಬ ಸ್ಥಿತಿಯನ್ನು ನಾವು ತಲುಪಿದ್ದೇವೆ. 2-3 ಜಾತಿಗಳಷ್ಟೆ ಈ ದೇಶದ ಸಂಪತ್ತನ್ನು ಅನುಭವಿಸುತ್ತಿವೆ. ಉಳಿದ ಜಾತಿಯವರು ಸಂಪತ್ತನ್ನು ಪಡೆಯುವುದಿರಲಿ, ಜೀವನ ನಿರ್ವಹಣೆಗೂ ಪರದಾಡಬೇಕಾದ ಸ್ಥಿತಿ ಇಂದಿಗೂ ಇದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಯಾವ ಜಾತಿಯವರಿಗೇನು ತೊಂದರೆ?’ ಎಂದು ಆಕ್ರೋಶದಿಂದ ಕೇಳಿದರು.

‘ರಾಜಕೀಯ ‌ಪಕ್ಷಗಳೇಕೆ ಲಿಂಗಾಯತರು ಹಾಗೂ ಒಕ್ಕಲಿಗರನ್ನು ಮಾತ್ರವೇ ಓಲೈಸುತ್ತಾರೆ? ಬೇರೆ ಜಾತಿಗಳ ಮತ ಬೇಡವೇ? ಹಾಗಾಗಿಯೇ ಯಾವ ಜಾತಿಯವರು ಎಷ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಲೇಬೇಕು. ಎಲ್ಲೆಡೆಯೂ ಬಲಾಢ್ಯ ಜಾತಿಗಳ ಪ್ರಾಬಲ್ಯವೇ ಕಂಡುಬರುತ್ತಿದೆ. ಭೂ ಒಡೆತನವೂ ಅವರಲ್ಲೇ ಜಾಸ್ತಿ ಇದೆ. ದೇಶ ಅಭಿವೃದ್ಧಿ ಆಗಬೇಕಾದರೆ ಜಾತಿ ಜನಗಣತಿ ನಡೆಯಲೇಬೇಕು. ರಾಜ್ಯದಲ್ಲೂ ವರದಿ ಬಿಡುಗಡೆ ಆಗಲೇಬೇಕು. ಸಾಂಸ್ಕೃತಿಕ ಕ್ರಾಂತಿ ಆಗಲೇಬೇಕು’ ಎಂದು ಒತ್ತಾಯಿಸಿದರು.

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಉಗ್ರ ನರಸಿಂಹೇಗೌಡ ಮಾತನಾಡಿದರು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಕಿರಂಗೂರು ಸ್ವಾಮಿ, ಚಾ.ಶಿವಕುಮಾರ್ ಹಾಗೂ ಶಿವಮೂರ್ತಿ ಇದ್ದರು.

‘ಕಳವಾಗಿದೆ ಎಂದರೆ ಏನರ್ಥ?’

‘ಸರ್ಕಾರದ ಆಯೋಗ ಸಿದ್ಧಪಡಿಸಿದ್ದ ವರದಿ ಕಳವಾಗಿದೆ ಎಂದರೆ ಏನರ್ಥ, ಅಧಿಕಾರಿಗಳು ಕಳ್ಳರಾ?’ ಎಂದು ಆಕ್ರೋಶದಿಂದ ಕೇಳಿದ ಅವರು, ‘ವರದಿ ಕಳವಾಗಿದೆ ಎಂದರೆ ಅದು ಕೊಲೆಯ ಸಮಾನ. ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಮಹದೇವಪ್ಪ ಒತ್ತಾಯಿಸಿದರು.

‘ಜಾತಿ ಗಣತಿ ವರದಿ ಬಗ್ಗೆ ಲಘುವಾಗಿ ಮಾತನಾಡುವುದನ್ನು ನೋಡಿದರೆ ನಾಚಿಕೆಯಾಗುತ್ತದೆ. ವಿರೋಧಿಸುತ್ತಿರುವ ಮಠಾಧಿಪತಿಗಳು, ರಾಜಕಾರಣಿಗಳು ಈಗ ಸುಮ್ಮನಿರಬೇಕು. ಬಿಡುಗಡೆಯಾದಾಗ, ಅನ್ಯಾಯವಾಗಿದ್ದಲ್ಲಿ ಪ್ರತಿಭಟಿಸಲು ಅವಕಾಶ ಇದೆ’ ಎಂದರು.

‘ಮಕ್ಕಳು ಅಪ್ಪನ ಆಸ್ತಿಯಲ್ಲಿ ಪಾಲು ಕೇಳುವಂತೆಯೇ, ದೇಶ ಹಾಗೂ ರಾಜ್ಯದ ಸಂಪತ್ತಿನಲ್ಲಿ ನಾವೆಲ್ಲರೂ ಪಾಲು ಕೇಳಬೇಕಾದ ಕಾಲ ಬಂದಿದೆ’ ಎಂದು ತಿಳಿಸಿದರು.

‘ಸಾಮಾಜಿಕ ನ್ಯಾಯದ ಅನ್ನದ ಬಟ್ಟಲು’

ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ‘ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬ ಸಮೀಕ್ಷೆಯು ವರದಿ (ಜಾತಿ ಗಣತಿ) ಬಿಡುಗಡೆಗಾಗಿ ಹಕ್ಕೊತ್ತಾಯವನ್ನು ಎಲ್ಲ ಕಡೆಗಳಲ್ಲೂ ಮಂಡಿಸಬೇಕು’ ಎಂದರು.

‘ಸೋರಿಕೆಯಾಗಿದೆ ಎಂಬ ಅಂಶಗಳನ್ನು ಇಟ್ಟುಕೊಂಡು ಕೆಲವೇ ಜಾತಿಯವರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಧಿಕೃತವಾಗಿ ಕೈಸೇರುವ ಮುನ್ನವೇ ಕೆಲವು ಬಲಾಢ್ಯ ಸಮಾಜಗಳು ಅದರ ವಿರುದ್ಧ ಧ್ವನಿ ಎತ್ತಿವೆ. ಬೇರೆಯವರಿಗೆ ಪ್ರಾತಿನಿಧ್ಯ ಜಾಸ್ತಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಆತಂಕ ಪಡುತ್ತಿದ್ದಾರೆ’ ಎಂದು ಹೇಳಿದರು.

‘ಸಾಮಾಜಿಕ ನ್ಯಾಯದ ಅನ್ನದ ಬಟ್ಟಲಾದ ಈ ವರದಿ ಬಿಡುಗಡೆ ಆಗಬೇಕು. ಸರ್ಕಾರ ಸ್ವೀಕಾರ ಮಾಡಬೇಕು. ಸಾರ್ವಜನಿಕ ಚರ್ಚೆಗೆ ಅದನ್ನು ಬೇಡಬೇಕು. ರಾಜಕೀಯ ಮುತ್ಸದ್ದಿತನವನ್ನು ಮೆರೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.