ಎಚ್.ಡಿ.ಕೋಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಬೀಸಿದ ಬಿರುಗಾಳಿಯಿಂದ ಬಾಳೆ ಬೆಳೆ ನೆಲಕಚ್ಚಿದೆ.
ತಾಲ್ಲೂಕಿನ ನಾಗನಹಳ್ಳಿಯ ರೈತ ಬಾಲರಾಜ್, ಕಟ್ಟೇಮನುಗನಹಳ್ಳಿಯ ನಾಗರಾಜು ಸೇರಿದಂತೆ ವಿವಿಧ ರೈತರ ಜಮೀನಿನಲ್ಲಿದ್ದ ಫಲ ಕೊಡುವ ಹಂತದಲ್ಲಿದ್ದ ಬಾಳೆಗಿಡಗಳು ಬಿರುಗಾಳಿ ಹೊಡೆತಕ್ಕೆ ಗೊನೆ ಸಮೇತ ಗಿಡಗಳು ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತ ಬಾಲರಾಜ್ ಮಾತನಾಡಿ, ‘ಸುಮಾರು ₹ 8 ಲಕ್ಷಕ್ಕೂ ಹೆಚ್ಚು ಆದಾಯ ತರುತ್ತಿದ್ದ ಬಾಳೆ ನಷ್ಟವಾಗಿದೆ, ಸಾಲ ಮಾಡಿ ಬೆಳೆದ ಬೆಳೆ ಫಲ ಕೈ ಸೇರುವ ಹಂತದಲ್ಲಿದ್ದಾಗ ಬಿರುಗಾಳಿಗೆ ಸಿಲುಕಿದ್ದು ಸಂಪೂರ್ಣ ತೋಟವೇ ನಾಶವಾಗಿದೆ’ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಪರಿಹಾರಕ್ಕೆ ಒತ್ತಾಯ: ‘ಈ ಭಾಗದಲ್ಲಿ ಬೀಸಿದ ಬಿರುಗಾಳಿಗೆ ಬಾಳೆ ಬೆಳೆ ಹಾಳಾಗಿದ್ದು. ಸಂಬಂಧಿಸಿದ ಇಲಾಖೆ ಬೆಳೆ ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ಧನ ವಿತರಿಸಬೇಕು’ ಎಂದು ರೈತ ಕೆಂಡಗಣ್ಣಸ್ವಾಮಿ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ನಾಗರಾಜು ಎಂಬುವವರು 2 ಎಕರೆ ಗುತ್ತಿಗೆಗೆ ಪಡೆದು ಬೆಳೆದಿದ್ದ ಬಾಳೆ ಮಳೆ- ಗಾಳಿಗೆ ನಾಶವಾಗಿದೆ
‘ಬಡ ರೈತರು ಮತ್ತು ದಲಿತರು ಜೀವನ ಕಟ್ಟಿಕೊಳ್ಳಲು ಸಾಲ ಮಾಡಿ ಬೆಳೆದ ಬೆಳೆ ನಷ್ಟವಾಗಿರುವುದರಿಂದ ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವನಸಿರಿ ಶಂಕರ್ ಒತ್ತಾಯಿಸಿದ್ದಾರೆ.
ಪ್ರಥಮ ಮಳೆ: ಮಿಂದೆದ್ದ ಮಕ್ಕಳು
ಹುಣಸೂರು: ನಗರ ಸೇರಿದಂತೆ ತಾಲ್ಲೂಕಿನ ಕೆಲವು ಭಾಗದಲ್ಲಿ ಸೋಮವಾರ ಮಧ್ಯಾಹ್ನ ಈ ಸಾಲಿನ ಪ್ರಥಮ ವರ್ಷಧಾರೆ ಸುರಿದು, ಹರುಷ ಮೂಡಿಸಿದೆ.
ಮಧ್ಯಾಹ್ನ 3.40 ರಿಂದ 3.55 ವರೆಗೆ ಹದಿನೈದು ನಿಮಿಷ ಗುಡುಗು ಸಹಿತ ಮಳೆ ಅಬ್ಬರಿಸಿತು. ಶಾಲೆಗಳು ಬಿಡುವಿನ ಸಮಯಕ್ಕೆ ಏಕಾಏಕಿ ಬಂದ ಮಳೆಯಿಂದ ಪೋಷಕರು ದ್ವಿಚಕ್ರ ವಾಹನದಲ್ಲಿ ಛತ್ರಿ ಹಿಡಿದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು. ಮಕ್ಕಳು ಮಳೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದರು.
ಬಿಸಿಲಿನ ಝಳ: ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚಿದ್ದು ಮಧ್ಯಾಹ್ನ 12 ಗಂಟೆ ಆಸುಪಾಸಿಗೆ 34 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಬಿಸಿಲಿನ ಝಳಕ್ಕೆ ಮಳೆ ತಂಪೆರೆದು ಸಂಜೆ 5.30 ರಲ್ಲಿ 27 ಡಿಗ್ರಿ ತಾಪಮಾನವಿತ್ತು.
ಹರ್ಷ: ಪ್ರಥಮ ವರ್ಷಧಾರೆಯನ್ನು ಕೆಲವರು ವಿಡಿಯೊ ಚಿತ್ರೀಕರಣ ಮಾಡಿಕೊಂಡು ಸಂತೋಷಪಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.