ADVERTISEMENT

‘ಅಗ್ನಿಪಥ’ ವಿರೋಧಿಸಿ ನಡೆಯುತ್ತಿರುವ ದಾಂದಲೆ ಅರ್ಥಹೀನ: ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 20:32 IST
Last Updated 19 ಜೂನ್ 2022, 20:32 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಮೈಸೂರು: ‘ಕೇಂದ್ರ ಸರ್ಕಾರ ಪ್ರಕಟಿಸಿರುವ ‘ಅಗ್ನಿಪಥ’ ಬಹಳ ಒಳ್ಳೆಯ ಯೋಜನೆ. ಇದನ್ನು ಪ್ರಕಟಿಸುತ್ತಿದಂತೆಯೇ ಯುವಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದ್ದುನಿಂತು ಗೌರವ ಸೂಚಿಸಬೇಕಿತ್ತು. ಅದನ್ನು ಬಿಟ್ಟು ಅರ್ಥವಿಲ್ಲದೆ ದಾಂದಲೆ ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ದೇಶದ ವಿವಿಧೆಡೆ ಪ್ರತಿಭಟನಾನಿರತ ಯುವಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ದೇಶ ಕಾಯುವುದಕ್ಕೆ ಹೋಗುವವರು ಸಾರ್ವಜನಿಕ ಆಸ್ತಿ–ಪಾಸ್ತಿಗೆ ಬೆಂಕಿ ಹಚ್ಚುತ್ತಾರೆಯೇ? ಅವರು ದಾಂದಲೆ ನಡೆಸುತ್ತಿರುವುದನ್ನು ನೋಡಿದರೆ ಅಚ್ಚರಿಯಾಗುತ್ತಿದೆ. ಕಾಂಗ್ರೆಸ್ ಪಕ್ಷವು ಗಲಾಟೆಗೆ ನೇರವಾಗಿಯೇ ಬೆಂಬಲ ಕೊಡುತ್ತಿದೆ’ ಎಂದು ಆರೋಪಿಸಿದರು.

‘ಅಗ್ನಿಪಥ ಯೋಜನೆಯಡಿ ಆಯ್ಕೆಯಾಗಿ ಕಾರ್ಯನಿರ್ವಹಿಸಿ ವಾಪಸಾದವರಿಗೆ ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಇನ್ನಿತರ ಭದ್ರತಾ ಏಜೆನ್ಸಿಗಳಲ್ಲಿ ನೇಮಕ‌ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ನಡೆದ ಘರ್ಷಣೆ, ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಅದು ವೈಯಕ್ತಿಕ ಜಗಳ‌‌ದಿಂದಾಗಿರುವ ಕೊಲೆ. ಅದೊಂದು ಚಿಕ್ಕ ಗಲಾಟೆ. ಮೂರ್ನಾಲ್ಕು ವರ್ಷಗಳಿಂದ ದೇವಸ್ಥಾನದ ಜಾಗದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಅಧಿಕಾರಿಗಳ ಸಭೆ:ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 20 ಹಾಗೂ 21ರಂದು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಗೃಹ ಸಚಿವರು ಅಧಿಕಾರಿಗಳ ಸಭೆ ನಡೆಸಿದರು.

‘ಭದ್ರತೆಗೆ ಎಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲಿಲ್ಲ. ‘ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದೇವೆ. ಅಂಕಿ–ಸಂಖ್ಯೆ ಪೊಲೀಸ್ ಆಯುಕ್ತರಿಗೆ ಗೊತ್ತಿದೆ’ ಎಂದಷ್ಟೆ ಪ್ರತಿಕ್ರಿಯಿಸಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.