ADVERTISEMENT

ನಂಜನಗೂಡು | ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:04 IST
Last Updated 22 ಸೆಪ್ಟೆಂಬರ್ 2025, 5:04 IST
ನಂಜನಗೂಡಿನ  ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಕುರಹಟ್ಟಿ ಮಹೇಶ್ ಉದ್ಘಾಟಿಸಿ, ಮಾತನಾಡಿದರು
ನಂಜನಗೂಡಿನ  ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಕುರಹಟ್ಟಿ ಮಹೇಶ್ ಉದ್ಘಾಟಿಸಿ, ಮಾತನಾಡಿದರು   

ನಂಜನಗೂಡು: ನರಸೇಗೌಡ, ಎಂ.ಮಹದೇವ್ ಅವರಂತಹ ಮುತ್ಸದ್ದಿಗಳು ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು, ಸಂಘ ಸದೃಢವಾಗಿ ಅಭಿವೃದ್ಧಿಯತ್ತ ಮುನ್ನಡೆದಿದೆ ಎಂದು ಸಂಘದ ಅಧ್ಯಕ್ಷ ಕುರಹಟ್ಟಿ ಮಹೇಶ್ ತಿಳಿಸಿದರು.

ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಸಹಕಾರಿ ಧುರೀಣ ನರಸೇಗೌಡರು ಅಂದು ಕೇವಲ ₹300 ಬೆಲೆಗೆ ಖರೀದಿಸಿದ್ದ ಒಂದು ಎಕರೆ ಭೂಮಿ ಇಂದು ಕೋಟ್ಯಂತರ ರೂಪಾಯಿ ಸ್ವತ್ತಾಗಿದೆ. ಬಂಡವಾಳದ ಕೊರತೆಯಿಂದ ಸಂಘಕ್ಕೆ ಸೇರಿದ 5 ಎಕರೆ ಜಾಗವನ್ನು ನಿವೇಶನಗಳಾಗಿ ಅಭಿವೃದ್ಧಿಪಡಿಸಿ ಬಂಡವಾಳ ಕ್ರೋಡೀಕರಿಸಿ ಸಂಘದ ಅಭಿವೃದ್ಧಿಗೆ ಬಳಸಲಾಗಿದೆ. ಸಂಘವನ್ನು 25 ವರ್ಷಗಳ ಕಾಲ ನಿರ್ದೇಶಕನಾಗಿ, 13 ವರ್ಷಗಳ ಕಾಲ ಅಧ್ಯಕ್ಷನಾಗಿ ಮುನ್ನಡೆಸುವ ಸದಾವಕಾಶವನ್ನು ಸದಸ್ಯರು ಕೊಟ್ಟಿದ್ದೀರಿ. ಸಂಘದ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸಲು ಸಂಘ ಬದ್ಧವಾಗಿದೆ. ಮುಂದಿನ ವರ್ಷ ಸಂಘ ₹30 ಲಕ್ಷ ಲಾಭ ಗಳಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಿಂಧುವಳ್ಳಿ ಕೆಂಪಣ್ಣ, ಚಿನ್ನಂಬಳ್ಳಿ ರಾಜು, ಎನ್.ಎಂ.ಮಂಜುನಾಥ್, ವಿ.ಆರ್.ವಿಜಯ್ ಕುಮಾರ್, ಶಿವಕುಮಾರ್, ಪರಶಿವಮೂರ್ತಿ, ಎಚ್.ಜಿ.ಸುನಂದ, ಮಂಜುಳ ಮಧು, ವಿಶ್ವಾಸ್, ಜಿ.ಡಿ.ಮಹೇಶ್, ಆರ್.ಸರ್ವೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.