ADVERTISEMENT

ಮೈಸೂರು: ಬಿರು ಬಿಸಿಲಿಗೆ ಉದುರುತ್ತಿವೆ ಕಾಯಿ

ಮಾವು ಬೆಳೆಗೆ ಬೇಸಿಗೆಯ ಸಂಕಷ್ಟ; ಇಳುವರಿ ಕುಸಿತ ಸಾಧ್ಯತೆ

ಆರ್.ಜಿತೇಂದ್ರ
Published 12 ಏಪ್ರಿಲ್ 2024, 5:44 IST
Last Updated 12 ಏಪ್ರಿಲ್ 2024, 5:44 IST
ಮಾವು (ಸಂಗ್ರಹ ಚಿತ್ರ)
ಮಾವು (ಸಂಗ್ರಹ ಚಿತ್ರ)   

ಮೈಸೂರು: ಬಿರು ಬೇಸಿಗೆಯಿಂದಾಗಿ ಈ ಬಾರಿ ಜಿಲ್ಲೆಯ ಮಾವಿನ ತೋಟಗಳಲ್ಲಿ ಹೂವು ಉದುರತೊಡಗಿದ್ದು, ಇಳುವರಿ ಕಡಿಮೆಯಾಗುವ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ಈ ವರ್ಷ 4 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಶೇ 60–70ರಷ್ಟು ಮರಗಳು ಹೂ ಬಿಟ್ಟಿರುವುದಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಕಾಯಿ ಕಚ್ಚುವ ಹಂತದಲ್ಲಿ ಬೇಸಿಗೆಯ ತಾಪ ವಿಪರೀತವಾದ್ದರಿಂದ ಹೂವು ನೆಲ ಕಚ್ಚುತ್ತಿವೆ. ಕೆಲವೆಡೆ ಪೀಚು ಹಾಗೂ ಸಣ್ಣ ಗಾತ್ರದ ಕಾಯಿಗಳೂ ಉದುರುತ್ತಿವೆ. ಬಿಸಿಲು ಹೆಚ್ಚಿದಷ್ಟೂ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ.

ಸದ್ಯ ಮಾವಿನ ತೋಟಗಳಿಗೆ ನೀರಿನ ಕೊರತೆ ವಿಪರೀತವಾಗಿದೆ. ನೀರಾವರಿ ಸೌಲಭ್ಯವುಳ್ಳ ಕೆಲವು ರೈತರು ಕೃಷಿ ಪಂಪ್‌ಸೆಟ್‌ಗಳ ಮೂಲಕ ವಾರಕ್ಕೆ ಒಮ್ಮೆ ನೀರು ಹಾಯಿಸತೊಡಗಿದ್ದಾರೆ. ಕೆಲವು ಕಡೆ ಟ್ಯಾಂಕರ್‌ ಮೂಲಕವೂ ಮರಗಳಿಗೆ ನೀರುಣಿಸಲಾಗುತ್ತಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಸಿಗುವುದು ಅನುಮಾನವಾಗಿದೆ.

ADVERTISEMENT

ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕಿನ ಇಲವಾಲ, ಹುಲ್ಲಹಳ್ಳಿ, ಜಯಪುರ ಹೋಬಳಿ ಜೊತೆಗೆ ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆ, ಹಂಪಾಪುರ ಭಾಗಗಳಲ್ಲಿ ಮಾವು ಬೆಳೆಯಲಾಗುತ್ತದೆ. ಬಾದಾಮಿ, ರಸಪುರಿ, ಸೇಂದೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ, ಸಕ್ಕರಗುತ್ತಿ ತಳಿಗಳನ್ನು ಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಹಿಂದಿನ ಸಾಲುಗಳಲ್ಲಿ ಹೆಕ್ಟೇರ್‌ಗೆ ಸರಾಸರಿ 7–8 ಟನ್‌ ಇಳುವರಿ ಸಿಗುತ್ತಿತ್ತು. 2017–18ರಲ್ಲಿ ಜಿಲ್ಲೆಯಲ್ಲಿ 4,144 ಹೆಕ್ಟೇರ್‌ನಲ್ಲಿ ಒಟ್ಟು 34,701 ಟನ್‌ಗಳಷ್ಟು ಇಳುವರಿ ಲಭಿಸಿತ್ತು. 2018–19ರ ಸಾಲಿನಲ್ಲಿ 4,136 ಹೆಕ್ಟೇರ್ ಪ್ರದೇಶದಲ್ಲಿ 40 ಸಾವಿರ ಟನ್‌ನಷ್ಟು ಇಳುವರಿ ಸಿಕ್ಕಿತ್ತು. ಈ ವರ್ಷ ಜಿಲ್ಲೆಯಲ್ಲಿ 25 ಸಾವಿರದಿಂದ 30 ಸಾವಿರ ಟನ್‌ ಉತ್ಪಾದನೆ ಸಿಕ್ಕರೆ, ಅದೇ ಹೆಚ್ಚು ಎನ್ನುವಂತೆ ಆಗಿದೆ.

‘ಕಳೆದ ವರ್ಷವಿಡೀ ಜಿಲ್ಲೆಗೆ ಮಳೆಯ ಕೊರತೆ ಕಾಡಿತು. ಈ ಬಾರಿ ಇನ್ನೂ ಬೇಸಿಗೆ ಮಳೆ ಬಂದಿಲ್ಲ. ತೇವಾಂಶದ ಕೊರತೆಯಿಂದಾಗಿ ಮಾವಿನ ಫಸಲು ಅತ್ತಿಂದಿತ್ತ ಆಗಿದೆ. ಹೂವು ಕಚ್ಚಿದ್ದರಲ್ಲಿ ಒಂದು ಪಾಲು ಬಿಟ್ಟರೂ ಉತ್ತಮ ಇಳುವರಿ ಬರುತ್ತದೆ. ಮುಂದಿನ ಕೆಲವು ದಿನದಲ್ಲಿ ಮಳೆಯಾದಲ್ಲಿ ಫಸಲು ಕೈ ಸೇರಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌.

ಬೇಸಿಗೆ ತೀವ್ರವಾಗಿರುವುದರಿಂದ ಸದ್ಯ ಮಾವಿನ ತೋಟಗಳಲ್ಲಿ ಜೇನ್ನೋಣಗಳ ಒಡಾಟ ಕಡಿಮೆಯಾಗಿದೆ. ಇದರಿಂದ ಹೂವುಗಳ ನಡುವೆ ಪರಾಗ ಸ್ಪರ್ಶ ಪ್ರಕ್ರಿಯೆಯೂ ಕಡಿಮೆಯಾಗಿದ್ದು, ಉತ್ಪಾದನೆ ಮೇಲೆಯೂ ಪರಿಣಾಮ ಬೀರತೊಡಗಿದೆ. ಈ ಬಾರಿ ಮಾವಿಗೆ ಸದ್ಯಕ್ಕೆ ಕೀಟಬಾಧೆ ಇಲ್ಲ.

ತೀವ್ರ ಬಿಸಿಲಿನ ಕಾರಣಕ್ಕೆ ಅಲ್ಲಲ್ಲಿ ಮಾವಿನ ಹೂವು ಹೆಚ್ಚು ಉದುರಿದೆ. ಇನ್ನು ಕೆಲವು ದಿನಗಳಲ್ಲಿ ಮಳೆಯಾದಲ್ಲಿ ಬೆಳೆಗೆ ಹೆಚ್ಚು ಉಪಯುಕ್ತ ಆಗುತ್ತದೆ

-ಮಂಜುನಾಥ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಕಳೆದ ಜನವರಿ–ಫೆಬ್ರುವರಿಯಲ್ಲಿ ತೋಟದಲ್ಲಿನ ಮಾವಿನ ಮರಗಳು ಹೂವು ಕಚ್ಚಿದ್ದವು. ಆದರೆ ಬಿಸಿಲಿನ ಕಾರಣಕ್ಕೆ ಬಹುತೇಕ ಹೂವು ಉದುರಿ ಮರ ಬೋಳಾಗಿದೆ. ಶೇ 25–30ರಷ್ಟು ಫಸಲು ಸಿಕ್ಕರೇ ಹೆಚ್ಚು

-ಶಂಕರ್‌ ಮಾವು ಬೆಳೆಗಾರ ಮೇಗಳಾಪುರ

ಮಾರುಕಟ್ಟೆಗೆ ಲಗ್ಗೆ

ಮೈಸೂರು ಭಾಗದಲ್ಲಿ ಮಾವಿನ ಕೊಯ್ಲು ಆರಂಭ ಆಗಲು ಇನ್ನೂ ಕನಿಷ್ಠ ಒಂದು ತಿಂಗಳು ಬೇಕಿದೆ. ಆದರೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಮಾವು ನಿಧಾನವಾಗಿ ಇಲ್ಲಿನ ಮಾರುಕಟ್ಟೆಗೆ ಕಾಲಿಡುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಮಾವಿನ ಕೊಯ್ಲು ನಡೆದಿದ್ದು ಬೆಲೆಯೂ ದುಬಾರಿ ಇದೆ. ಕಾರ್ಬೈಡ್ ಬಳಸಿ ಮಾಗಿಸಿದ ಹಣ್ಣು ಮಾರುಕಟ್ಟೆಗೆ ಬಂದಿದ್ದು ಅಂತಹ ಹಣ್ಣನ್ನು ಖರೀದಿ ಮಾಡದಿರುವುದೇ ಒಳಿತು. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸಿಗಲು ಇನ್ನೂ ಕೆಲವು ವಾರ ಬೇಕಾಗಬಹುದು ಎನ್ನುತ್ತಾರೆ ಕೆಲ ವರ್ತಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.