ಮೈಸೂರು: ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಇಲ್ಲಿನ ರಾಮಕೃಷ್ಣನಗರ ನೃಪತುಂಗ ಶಾಲೆಯಲ್ಲಿ ಎರಡು ದಿನಗಳವರೆಗೆ ಆಯೋಜಿಸಿರುವ ‘ರಾಜ–ನೈತಿಕ ಶಾಲೆ’ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಶನಿವಾರ ಆರಂಭಗೊಂಡಿತು.
ಶಿಬಿರ ಉದ್ಘಾಟಿಸಿದ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್, ‘ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ಧರ್ಮನಿರಪೇಕ್ಷತೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತುತ್ತಿದೆ. ಹೆಚ್ಚುತ್ತಿರುವ ಅನ್ಯಾಯಗಳ ವಿರುದ್ಧ ಬಲಿಷ್ಠ ಹೋರಾಟ ಕಟ್ಟುತ್ತಾ ಬಂದಿದೆ’ ಎಂದು ತಿಳಿಸಿದರು.
‘ಈ ರಾಜ್ಯಮಟ್ಟದ ಅಧ್ಯಯನ ಶಿಬಿರವು ಮುಖ್ಯವಾಗಿ ಸಮಾಜದ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಮಾರ್ಕ್ಸ್‌ವಾದದ ತತ್ವಜ್ಞಾನ ಹಾಗೂ ಸಮಾಜ ಬೆಳೆದು ಬಂದ ಹಾದಿ ಕುರಿತು ನಡೆಯಲಿದೆ’ ಎಂದರು.
‘ಮಾರ್ಕ್ಸ್‌ವಾದ ಹಾಗೂ ಮಾನವ ಸಮಾಜದ ಬೆಳವಣಿಗೆ’ ಕುರಿತು ಮಾತನಾಡಿದ ಎಐಡಿಎಸ್‌ಒ ಅಧ್ಯಕ್ಷೆ ಕೆ.ಎಸ್.ಅಶ್ವಿನಿ, ‘ಮಾರ್ಕ್ಸ್‌ವಾದ ಒಂದು ವಿಜ್ಞಾನ’ ಎಂದು ಪ್ರತಿಪಾದಿಸಿದರು.
ಸತ್ಯ ಶೋಧನೆಯ ತತ್ವಜ್ಞಾನ: ‘ಮಾರ್ಕ್ಸ್‌ವಾದವು ವೈಜ್ಞಾನಿಕವಾಗಿ ಸತ್ಯಶೋಧನೆ ಮಾಡುವ ತತ್ವಜ್ಞಾನವಾಗಿದೆ. ದ್ವಂದ್ವಾತ್ಮಕ ವಸ್ತುವಾದದ ಆಧಾರದ ಮೇಲೆ ನಿಂತಿರುವ ವಿಜ್ಞಾನಗಳ ವಿಜ್ಞಾನವಾಗಿದೆ. ಮಾನವನಿಂದ ಮಾನವನ ಮೇಲಿನ ನಡೆಯುತ್ತಿರುವ ಶೋಷಣೆ ವಿರುದ್ಧ ಹೋರಾಡುವ ಅಸ್ತ್ರವಾಗಿದೆ’ ಎಂದು ಹೇಳಿದರು.
ಮಾನವ ಸಮಾಜದ ಉಗಮ, ಆದಿ ಸಮತಾವಾದಿ ವ್ಯವಸ್ಥೆಯಿಂದ ಗುಲಾಮಗಿರಿ - ಊಳಿಗಮಾನ್ಯ ವ್ಯವಸ್ಥೆ ಹಾಗೂ ಪ್ರಸ್ತುತ ನಾವು ಬದುಕುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಮೊದಲಾದವುಗಳ ಬಗ್ಗೆ ತಿಳಿಸಿದರು.
‘ಇಂದಿನ ಸಾಮಾಜಿಕ ಸಮಸ್ಯೆಗಳಾದ ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಬಡತನ, ಹೆಣ್ಣುಮಕ್ಕಳ ಮೇಲಿನ ಅಪರಾಧಗಳು ಮೊದಲಾದ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ ಎಂಬುದನ್ನು ಮಾರ್ಕ್ಸ್‌ವಾದ ತೋರಿಸುತ್ತದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಗಳನ್ನು ಬೆಳೆಸಬೇಕೆಂದರೆ ಮಾರ್ಕ್ಸ್‌ವಾದವನ್ನು ದಿನ ನಿತ್ಯದ ಜೀವನದಲ್ಲಿ ಅಭ್ಯಾಸ ಮಾಡಬೇಕು’ ಎಂದರು.
ಎಐಡಿಎಸ್‌ಒ ರಾಜ್ಯ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯ ಕಲ್ಯಾಣ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷರಾದ ಹಣಮಂತು, ಅಭಯ ದಿವಾಕರ್, ಚಂದ್ರಕಲಾ, ಅಪೂರ್ವ, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್, ಜಿಲ್ಲಾ ಘಟದ ಅಧ್ಯಕ್ಷೆ ಚಂದ್ರಕಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.