
ರಂಗಾಯಣ ಆವರಣ
ಮೈಸೂರು: 25 ವರ್ಷಗಳ ಹಿಂದೆ ಇಲ್ಲಿನ ರಂಗಾಯಣದಲ್ಲಿ ಆರಂಭವಾದ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೂ, ಕೇಂದ್ರ ಸರ್ಕಾರವು 2000ನೇ ವರ್ಷವನ್ನು ‘ಮಹಿಳಾ ಸಬಲೀಕರಣ ವರ್ಷ’ ಎಂದು ಘೋಷಿಸುವುದಕ್ಕೂ ಅವಿನಾಭಾವ ಸಂಬಂಧ.
ಆಗ ರಂಗಾಯಣದ ನಿರ್ದೇಶಕರಾಗಿದ್ದ ಪ್ರಸನ್ನ ಅವರಿಗೆ ರಾಷ್ಟ್ರೀಯ ನಾಟಕೋತ್ಸವವನ್ನು ರೂಪಿಸಬೇಕೆಂಬ ಹಂಬಲಕ್ಕೆ ಇದೇ ನೀರೆರೆಯಿತು ಎಂಬುದೇ ವಿಶೇಷ. ಮಹಿಳೆಯರನ್ನೇ ಕೇಂದ್ರವಾಗಿರಿಸಿಕೊಂಡು ನಾಟಕೋತ್ಸವ ರೂಪುಗೊಳ್ಳಲು ಇದೇ ಪ್ರಮುಖ ಪ್ರೇರಣೆ. ‘ಅಕ್ಕ’ ಎಂಬ ಹೆಸರಿನ ಉತ್ಸವವು ಕರ್ನಾಟಕದ ಮಟ್ಟಿಗೆ ಮೊದಲ ರಾಷ್ಟ್ರೀಯ ನಾಟಕೋತ್ಸವ ಎಂಬ ದಾಖಲೆಯನ್ನೂ ಬರೆಯಿತು.
ರವೀಂದ್ರನಾಥ ಠಾಗೋರರ ನೃತ್ಯ ನಾಟಕ ‘ನರ್ತಕಿ ಪೂಜೆ’, ಗಿರೀಶ್ ಕಾರ್ನಾಡರ ‘ನಾಗಮಂಡಲ’, ಲಕ್ಷ್ಮೀ ಚಂದ್ರಶೇಖರ್ ಅವರ ‘ಸಿಂಗಾರವ್ವ ಮತ್ತು ಅರಮನೆ’, ಮುಂಬೈನ ‘ಏಕ್ ಜೂಟ್ ’ತಂಡದ ನಾದಿರಾ ಬಬ್ಬರ್ ನಿರ್ದೇಶನದ ‘ಸಂಧ್ಯಾ ಛಾಯಾ’ ಆ ಸಂದರ್ಭದಲ್ಲಿ ಪ್ರದರ್ಶನಗೊಂಡ ಪ್ರಮುಖ ನಾಟಕಗಳು. ಮೈಸೂರಿನ ಹವ್ಯಾಸಿ ಕಲಾವಿದರು, ನೀನಾಸಂ ಮತ್ತು ರಾಷ್ಟ್ರೀಯ ರಂಗ ಶಾಲೆ ಜೊತೆಗೆ ವಿವಿಧ ರಾಜ್ಯಗಳ 29 ರಂಗ ತಂಡಗಳು ಉತ್ಸವದ ಮೆರುಗು ಹೆಚ್ಚಿಸಿದ್ದವು. ವೈವಿಧ್ಯಮಯ ನಾಟಕಗಳನ್ನು ನೋಡಲು ಜನ ಮೂರ್ನಾಲ್ಕು ದಿನಗಳ ಮುಂಚೆಯೇ ಟಿಕೆಟ್‌ಗಳನ್ನು ಖರೀದಿಸಿ ಬಂದಿದ್ದರು ಎಂಬ ನೆನಪೂ ಕೆಲವರಲ್ಲಿದೆ.
2001ರ ನವೆಂಬರ್‌ನಲ್ಲಿ ಉತ್ಸವ ನಡೆದಾಗ ರಂಗಾಯಣ ಈಗ ಇರುವಷ್ಟು ವಿಸ್ತರಣೆಗೊಂಡಿರಲಿಲ್ಲ. ಹೆಚ್ಚು ರಂಗಮಂದಿರಗಳೂ ಇರಲಿಲ್ಲ. ಉತ್ಸವದ ಸಮಾರೋಪ ಸಮಾರಂಭ ಭೂಮಿಗೀತ ರಂಗಮಂದಿರದಲ್ಲಿ ನಡೆದಿತ್ತು.
ಬಡಾವಣೆಗಳಲ್ಲೂ ನಾಟಕ
ಹೆಚ್ಚು ವಿಸ್ತರಣೆಗೊಳ್ಳದ ಅಂದಿನ ಮೈಸೂರಿನ ವಿವಿಧ ಬಡಾವಣೆಗಳಲ್ಲೂ ನಾಟಕಗಳು ಪ್ರದರ್ಶನಗೊಂಡು, ನಿವಾಸಿಗಳಲ್ಲಿ ನಾಟಕದ ಅಭಿರುಚಿಯನ್ನು ಮೂಡಿಸಿದವು. ವಿಚಾರಸಂಕಿರಣ, ಚರ್ಚೆ, ಕಲಾವಿದರಿಗೆ ಸನ್ಮಾನ, ಪುಸ್ತಕ ಪ್ರದರ್ಶನ, ಖಾದಿ ಬಟ್ಟೆ ಮಾರಾಟ, ಛಾಯಾಚಿತ್ರ ಪ್ರದರ್ಶನಗಳೂ ನಡೆದಿದ್ದವು.
ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳಿಗೆ ಆದ್ಯತೆ ಹಾಗೂ ಪ್ರಚಾರ ನೀಡಲೆಂದೇ ಸರ್ಕಾರ ಸಬಲೀಕರಣ ವರ್ಷವೆಂದು ಘೋಷಿಸಿದ್ದರಿಂದ, ಅದನ್ನೇ ಮುಖ್ಯ ಆಶಯವನ್ನಾಗಿಸಿಕೊಂಡು ಅಕ್ಕ ನಾಟಕೋತ್ಸವವನ್ನು ರೂಪುಗೊಳಿಸಲಾಗಿತ್ತು.– ಪ್ರಸನ್ನ, ರಂಗಕರ್ಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.