ADVERTISEMENT

ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ಫೆ.16ರಿಂದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 11:35 IST
Last Updated 14 ಫೆಬ್ರುವರಿ 2026, 11:35 IST
<div class="paragraphs"><p>38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ</p></div>

38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ

   

ಮೈಸೂರು: ಅಂಚೆ ಇಲಾಖೆಯಿಂದ ‘38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ’ವನ್ನು ಫೆ.16ರಿಂದ 20ರವರೆಗೆ ನಗರದಲ್ಲಿ ಆಯೋಜಿಸಲಾಗಿದೆ.

‘20 ವರ್ಷಗಳ ಬಳಿಕ ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಕ್ಯಾಂಪಸ್‌ನಲ್ಲಿರುವ ಕಾವೇರಿ, ನಳ ಸಭಾಂಗಣದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಹಾಗೂ ನಜರ್‌ಬಾದ್‌ನ ಅಂಚೆ ತರಬೇತಿ ಕೇಂದ್ರ (ಪಿಟಿಸಿ)ದ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ’ ಎಂದು ಕರ್ನಾಟಕ ಅಂಚೆ ವಲಯದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ದೇಶದ ವಿವಿದ ಭಾಗಗಳ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ 335 ಸಿಬ್ಬಂದಿ ಮತ್ತು ಅವರ ಮಕ್ಕಳು ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.‘

16ರಂದು ಉದ್ಘಾಟನೆ...

‘ಉದ್ಘಾಟನಾ ಸಮಾರಂಭ ಫೆ.16ರಂದು ಬೆಳಿಗ್ಗೆ 10ಕ್ಕೆ ನಡೆಯಲಿದ್ದು, ಅಂತರರಾಷ್ಟ್ರೀಯ ಖ್ಯಾತಿಯ ಮೈಸೂರು ಸಹೋದರರಾದ ವಿದ್ವಾನ್ ಮೈಸೂರು ಎಂ. ನಾಗರಾಜ್ ಹಾಗೂ ವಿದ್ವಾನ್ ಮೈಸೂರು ಎಂ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೇಂದ್ರ ಸಂವಹನ ಸಚಿವಾಲಯದ ಅಂಚೆ ಸೇವೆಗಳ ಮಹಾನಿರ್ದೇಶಕ ಜಿತೇಂದ್ರ ಗುಪ್ತಾ ಭಾಗವಹಿಸುವರು’ ಎಂದು ತಿಳಿಸಿದರು.

‘ಈ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವು ದೇಶದಾದ್ಯಂತ ಅಂಚೆ ನೌಕರರ ನಡುವೆ ಸಾಂಸ್ಕೃತಿಕ ವಿನಿಮಯ, ಸ್ನೇಹ, ಏಕತೆ ಹಾಗೂ ಒಗ್ಗಟ್ಟಿನ ಮನೋಭಾವ ಬೆಳೆಸುವ ಗುರಿ ಹೊಂದಿದೆ. 32 ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಶಾಸ್ತ್ರೀಯ ಸಂಗೀತ ಗಾಯನ, ಭರತನಾಟ್ಯ, ಕೂಚುಪುಡಿ, ನೃತ್ಯ, ಕಿರುನಾಟಕ ಮೊದಲಾದವುಗಳಲ್ಲಿ ಕಿರಿಯರು, ಹಿರಿಯರು, ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ಇರಲಿದೆ’ ಎಂದು ವಿವರಿಸಿದರು.

ಕರ್ನಾಟಕದವರ ಆಯ್ಕೆಗೆ...

‘ಫೆ.20ರಂದು ಬೆಳಿಗ್ಗೆ 8.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ಪಂಡಿತ್‌ ಎಂ.ವೆಂಕಟೇಶ್‌ಕುಮಾರ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್ ಜನರಲ್‌ ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

‘ಕಳೆದ ವರ್ಷ ಕೇರಳ ವೃತ್ತದಿಂದ ಕೋಯಿಕ್ಕೋಡ್‌ನಲ್ಲಿ ಸಮಾವೇಶ ನಡೆದಿತ್ತು. ಆಗ, ಕರ್ನಾಟಕ ಅಂಚೆ ವೃತ್ತ ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ಈ ಬಾರಿಯ ಸಿದ್ಧತೆಗಾಗಿ ಜನವರಿಯಲ್ಲಿ ಮೈಸೂರಿನ ಪಿಟಿಸಿಯಲ್ಲಿ ಜರುಗಿದ ಆಯ್ಕೆ ಪರೀಕ್ಷೆಯಲ್ಲಿಮ 150 ಮಂದಿ ನೌಕರರು ಹಾಗೂ ಅವರ ಮಕ್ಕಳು ಪಾಲ್ಗೊಂಡಿದ್ದರು. ಉತ್ತಮ ಪ್ರದರ್ಶನ ನೀಡಿದ 26 ಮಂದಿಯನ್ನು ಕರ್ನಾಟಕ ಅಂಚೆ ವೃತ್ತ ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ದೇಶದ ವಿವಿಧೆಡೆಯಿಂದ ಬರುವ ಸ್ಪರ್ಧಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ತೀರ್ಪುಗಾರರನ್ನಾಗಿ ಮೈಸೂರಿನ ವಿದ್ವಾಂಸರನ್ನು ಆಹ್ವಾನಿಸಲಾಗಿದೆ’ ಎಂದರು.

ಬೆಂಗಳೂರು ಕೇಂದ್ರ ವಲಯದ ನಿರ್ದೇಶಕಿ ವಿ.ತಾರಾ ಹಾಗೂ ಮೈಸೂರಿನ ಪಿಟಿಸಿ ನಿರ್ದೇಶಕ ಆಶಿಶ್‌ಸಿಂಗ್‌ ಠಾಕೂರ್ ಪಾಲ್ಗೊಂಡಿದ್ದರು.

ಸುಧಾರಿತ ತಂತ್ರಜ್ಞಾನ ಅಳವಡಿಕೆ...

‘ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು, ಅಂಚೆ ಇಲಾಖೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಪಾರ್ಸಲ್, ಸ್ಪೀಡ್ ಪೋಸ್ಟ್ ಸೇರಿದಂತೆ ಹಲವು ಸೇವೆಗಳಿಗೆ ಮೊಬೈಲ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ’ ಎಂದು ಸಂದೇಶ್ ಪ್ರತಿಕ್ರಿಯಿಸಿದರು.

‘ಯುವಜನರನ್ನು ಸೆಳೆಯಲು ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಮಾನಸಗಂಗೋತ್ರಿಯಲ್ಲಿ ಹೊಸದಾಗಿ ಅಂಚೆ ಕಚೇರಿ ತೆರೆಯಲು ಮಾತುಕತೆ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.