ADVERTISEMENT

ಹುಣಸೂರು: ಅರಮನೆ ನಗರಿಗೆ ‘ಗಜಪಯಣ’ ಇಂದು

ವೀರನಹೊಸಹಳ್ಳಿಯಿಂದ ಮೊದಲ ತಂಡದಲ್ಲಿ ಹೊರಡಲಿರುವ 9 ಆನೆಗಳು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 5:03 IST
Last Updated 1 ಸೆಪ್ಟೆಂಬರ್ 2023, 5:03 IST
ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ಗಜಪಯಣಕ್ಕೆ ತೆರಳಿದ ಆನೆಗಳಿಗೆ ಗುರುವಾರ ಪೂಜೆ ಸಲ್ಲಿಸಲಾಯಿತು
ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ಗಜಪಯಣಕ್ಕೆ ತೆರಳಿದ ಆನೆಗಳಿಗೆ ಗುರುವಾರ ಪೂಜೆ ಸಲ್ಲಿಸಲಾಯಿತು   

ಹುಣಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ‘ಗಜಪಯಣ’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ತಾಲ್ಲೂಕಿನ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಗಜಪಡೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ಕರೆತರಲಾಗುವುದು.

ಸೆ.1ರಂದು ಬೆಳಿಗ್ಗೆ 9.45ರಿಂದ 10.15ರಲ್ಲಿ ಸಲ್ಲುವ ‘ತುಲಾ’ ಲಗ್ನದಲ್ಲಿ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಚುನಾಯಿತ ಜನಪ್ರತಿನಿಧಿಗಳು ಪುಷ್ಪಾರ್ಚನೆ ಮಾಡಲಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಆನೆಗಳ ಪರಿಚಯ ಮಾಹಿತಿ ಬಿಡುಗಡೆ ಮಾಡಲಿದ್ದಾರೆ.

ವೀರನಹೊಸಹಳ್ಳಿ ವಲಯದ ಜಂಗಲ್ ಇನ್ ಹೋಟೆಲ್ ಬಳಿಯಲ್ಲಿ 3 ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಪೆಂಡಾಲ್ ಹಾಕಲಾಗಿದೆ. ಅರಣ್ಯದಂಚಿನಲ್ಲಿ ತಳಿರು ತೋರಣ, ವಿವಿಧ ವಿನ್ಯಾಸದಲ್ಲಿ ಸಿದ್ಧಗೊಂಡಿರುವ ಸುಸ್ವಾಗತ ಫಲಕಗಳು ಮತ್ತು ಜಾನಪದ ಸ್ಪರ್ಶದ ಹೋರ್ಡಿಂಗ್‌ಗಳು ರಾರಾಜಿಸುತ್ತಿವೆ. ಇದರಿಂದಾಗಿ ಹಬ್ಬದ ಕಳೆ ದೊರೆತಿದೆ. ಜಾನಪದ ಕಲಾ ತಂಡಗಳು ಮೆರುಗು ನೀಡಲಿವೆ.

ADVERTISEMENT

ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳನ್ನು ಮೈಸೂರಿಗೆ ಕಳುಹಿಸಲಾಗುವುದು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಿಂದ ‘ಅಭಿಮನ್ಯು’, ‘ಭೀಮ’ ಮತ್ತು ‘ಮಹೇಂದ್ರ’, ಬಳ್ಳೇ ಶಿಬಿರದಿಂದ ‘ಅರ್ಜುನ’, ಕೊಡಗು ಜಿಲ್ಲೆಯ ದುಬಾರೆ ಶಿಬಿರದಿಂದ ‘ಧನಂಜಯ’, ‘ಗೋಪಿ’, ‘ವಿಜಯಾ’, ‘ಕಂಜನ್’, ಭೀಮನಕಟ್ಟೆ ಕ್ಯಾಂಪ್‌ನಿಂದ ‘ವರಲಕ್ಷ್ಮಿ’ ಆನೆಗಳನ್ನು ಕರೆತರಲಾಗುವುದು.

ಸ್ಥಳೀಯ ಕಲಾವಿದರು ಹಾಗೂ ಬುಡಕಟ್ಟು ಜನರು ಕಂಸಾಳೆ, ಕೋಲಾಟ ಮೊದಲಾದ ಕಾರ್ಯಕ್ರಮ ನೀಡಲಿದ್ದಾರೆ. ನಾಗಾಪುರದ ಗಿರಿಜನ ಪುನರ್ವಸತಿ ಕೇಂದ್ರದ ಮಕ್ಕಳು ಹಾಗೂ ಟಿಬೆಟನ್‌ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಮತ್ತಷ್ಟು ಕಳೆಕಟ್ಟಿಕೊಡಲಿದೆ.

ಮೈಸೂರು ಅರಮನೆ ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಲಿದೆ. ಆಗಮಿಸುವ ಸಾರ್ವಜನಿಕರು ಮತ್ತು ಗಣ್ಯರಿಗೆ ಮೈಸೂರಿನ ಬಾಣಸಿಗರಿಂದ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಸಂತೋಷ್ ತಿಳಿಸಿದರು.

ಬಂಡೀಪುರದ ರಾಮಾಪುರ ಶಿಬಿರದಿಂದ ‘ರೋಹಿತ’ ಹಾಗೂ ‘ಹಿರಣ್ಯ’ ಆನೆಗಳನ್ನೂ ಕರೆತರಲಾಗುವುದು ಎಂದು ಇಲಾಖೆ ತಿಳಿಸಿದೆ.

ಪೂಜೆ ಸಲ್ಲಿಸಿದ ಶಾಸಕ

ಗುಂಡ್ಲುಪೇಟೆ: ಜಂಬೂಸವಾರಿಗೆ ಆಯ್ಕೆಯಾಗಿರುವ ಮೂರು ಆನೆಗಳ ಪೈಕಿ ರೋಹಿತ (17) ಮತ್ತು ಹೆಣ್ಣಾನೆ ಹಿರಣ್ಯ (47) ಆನೆಗಳಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗುರುವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಸಿಂಗಾರಗೊಂಡಿದ್ದ ಆನೆಗಳಿಗೆ ಕಾಯಿ ಬೆಲ್ಲ ಕಬ್ಬುಗಳನ್ನು ನೀಡಿದರು. ‘ಆನೆಗಳು ಆರೋಗ್ಯವಾಗಿ ಹೋಗಿ ಯಾವುದೇ ತೊಂದರೆ ಇಲ್ಲದೇ ದಸರಾದಲ್ಲಿ ಪಾಲ್ಗೊಂಡು ಹೆಸರು ತರಲಿ’ ಎಂದು ಹಾರೈಸಿದರು. ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾತನಾಡಿ ‘ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ದಸರಾದಲ್ಲಿ ಪಾಲ್ಗೊಳ್ಳಲಿರುವ ಸಾಕಾನೆಗಳಿಗೆ ತರಬೇತಿ ನೀಡಲಾಗಿದೆ. ಸೌಮ್ಯ ಸ್ವಭಾವದ ಆನೆಗಳವು’ ಎಂದರು. ಆಯ್ಕೆಯಾಗಿದ್ದ ಮತ್ತೊಂದು ಆನೆ ‘ಪಾರ್ಥಸಾರಥಿ’ಗೆ ಮದವೇರಿದ್ದು ಬಳಿಕ ಕಳುಹಿಸಲಾಗುವುದು ಎಂದು ಹೆಡಿಯಾಲ ಎಸಿಎಫ್ ಕೆ.ಪರಮೇಶ್ ತಿಳಿಸಿದರು.

ದುಬಾರೆಯಿಂದ ಬೀಳ್ಕೊಡುಗೆ

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದಿಂದ ಧನಂಜಯ ಗೋಪಿ ವಿಜಯ ಹಾಗೂ ಕಂಜನ್‌ ಆನೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಮಾವುತರು ಪೂಜೆ ಸಲ್ಲಿಸಿ ಹಣ್ಣುಗಳನ್ನು ತಿನ್ನಿಸಿ ಅವುಗಳೊಂದಿಗೆ ಲಾರಿಯಲ್ಲಿ ತೆರಳಿದರು. ಮಾವುತರಾದ ಜೆ.ಸಿ.ಭಾಸ್ಕರ್ ನವೀನ್ ಕುಮಾರ್ ಬೋಜಪ್ಪ ಜೆ.ಡಿ.ವಿಜಯ ಕಾವಾಡಿಗರಾದ ಶಿವು ಮಣಿ ಬಿ.ಪಿ.ಭರತ್ ಮಣಿಕಂಠ ಹಾಗೂ ಕುಟುಂಬದವರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.