ಮೈಸೂರು: ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ 69ನೇ ವರ್ಷಾಚರಣೆ ಪ್ರಯುಕ್ತ ನಗರ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆರಂಭವಾದ ಬೌದ್ಧ ಮಹಾ ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಬೌದ್ಧರು, ಅಂಬೇಡ್ಕರ್ ಅಭಿಮಾನಿಗಳು ಸಾಗರದಂತೆ ಹರಿದು ಬಂದರು.
ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲದೇ ಕಲಬುರಗಿ, ಬಾದಾಮಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು, ಪುರಭವನದ ಅಂಬೇಡ್ಕರ್ ಪ್ರತಿಮೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಬ್ಯಾಂಡ್‌ಸೆಟ್, ವಾದ್ಯಮೇಳಗಳ ಜೊತೆಗೆ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆಗಳು ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆ ಹಾಗೂ ಭಾವಚಿತ್ರವಿದ್ದ ರಥದೊಂದಿಗೆ ಹೆಜ್ಜೆಹಾಕಿದವು. ಬೌದ್ಧ ಧರ್ಮದ ಬಾವುಟ ಹಿಡಿದಿದ್ದ ಅನುಯಾಯಿಗಳು, ಬುದ್ಧ, ಅಂಬೇಡ್ಕರ್ ಅವರಿಗೆ ಜಯಕಾರ ಹಾಕಿದರು.
ಬುದ್ಧ ರಥಕ್ಕೆ 50ಕ್ಕೂ ಹೆಚ್ಚು ಬಿಕ್ಕುಗಳು ಚಾಲನೆ ನೀಡಿದರು. ಪಂಚಶೀಲ ಬಾವುಟಗಳು ಹಾರಾಡಿದವು. ಶ್ವೇತ ವಸ್ತ್ರ ಧರಿಸಿದ್ದ ಜನರು ಬುದ್ಧಂ, ಶರಣಂ ಗಚ್ಚಾಮಿ ಮಂತ್ರ ಪಠಿಸಿದರು. ಪುರಭವನದಿಂದ ಚಾಮರಾಜೇಂದ್ರ ವೃತ್ತ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಸಮ್ಮೇಳನ ನಡೆಯುತ್ತಿದ್ದ ಮಹಾರಾಜ ಕಾಲೇಜು ಮೈದಾನ ತಲುಪಿತು.
ಬಿಕ್ಕುಗಳಾದ ಮಯನ್ಮಾರ್‌ನ ಪನಿಂದ ಸಯಡೊ, ಲಾವೋಸ್‌ನ ರಾಂಡಿಸೋಟ್, ವಿಯೆಟ್ನಾಂನ ತಿಚ್‌ಮಿನ್ ಹಾನ್, ನಳಂದ ವಿಶ್ವವಿದ್ಯಾಲಯದ ಧಮ್ಮಗುರು ಕರ್ಮ ರಾನ್ರಿಯನ್ ಪುಂಚೆ, ಅರುಣಾಚಲ ಪ್ರದೇಶದ ಭಂತೆ ವಿಸುದ್ದಶೀಲ, ಕೊಳ್ಳೇಗಾಲದ ಮನೋರಕ್ಖಿತ ಭಂತೇಜಿ ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ‘ಪದ್ಮಪಾಣಿ’ ಲಲಿತಕಲಾ ಅಕಾಡೆಮಿ ವಿದ್ಯಾರ್ಥಿಗಳು ಬುದ್ಧ ತತ್ವವನ್ನು ಹಾಡಿದರು.
ಪನಿಂದ ಸಯಡೋ ಮಾತನಾಡಿ, ‘ನಮ್ಮೊಳಗಿನ ಬುದ್ಧ ಬೆಳಕನ್ನು ಹುಡುಕಬೇಕು. ಅಂಬೇಡ್ಕರ್ ಅವರಂತೆ ಜ್ಞಾನದಾಹಿಗಳಾಗಬೇಕು’ ಎಂದರು.
ನಳಂದ ವಿಶ್ವವಿದ್ಯಾಲಯದ ಧಮ್ಮಗುರು ಕರ್ಮ ರಾನ್ರಿಯನ್ ಪುಂಚೆ ಮಾತನಾಡಿ, ‘ಕರುಣೆ, ಪ್ರೀತಿಯಿಂದ ಕಂಡರೆ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ’ ಎಂದರೆ, ವಿಯಟ್ನಾಂನ ತಿಚ್‌ಮಿನ್ ಹಾನ್, ‘ವಿವಾಹದ ನಂತರದ ಜೀವನ ಸಾಗಿಸಲು ಅಧ್ಯಾತ್ಮ ಅಗತ್ಯ’ ಎಂದರು.
ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಮನೋರಕ್ಖಿತ ಭಂತೇಜಿ ಪಂಚಶೀಲ ಬೋಧಿಸಿದರು. ಅರುಣಾಚಲ ಪ್ರದೇಶದ ಭಂತೆ ವಿಸುದ್ಧಶೀಲ, ಕಲಬುರಗಿಯ ಬುದ್ಧವಿಹಾರದ ಭಂತೆ ವರಜ್ಯೋತಿ ಮಾತನಾಡಿದರು.
ನಂಜನಗೂಡು ತಾಲ್ಲೂಕಿನ ಮಲ್ಕಂಡಿ ಗ್ರಾಮದ ಮಕ್ಕಳು ‘ಬುದ್ಧ ಬೆಳಕು’ ನಾಟಕ ಪ್ರದರ್ಶಿಸಿದರು.
ಮೈಸೂರು: ‘ದೇಶದ ಸಮಾಜ ಸುಧಾರಣಾ ಚಳವಳಿಗಳ ಮೇಲೆ ಬೌದ್ಧ ಧರ್ಮದ ಪ್ರಭಾವ ಗಾಢವಾದುದು. ಅಂಬೇಡ್ಕರ್ ಸೇರಿದಂತೆ ಮಹಾತ್ಮರ ಹೋರಾಟಕ್ಕೆ ಬುದ್ಧ ಪ್ರೇರಕ ಶಕ್ತಿ ಆಗಿದ್ದಾರೆ’ ಎಂದು ಲೇಖಕಿ ಎಚ್.ಎಸ್. ಅನುಪಮಾ ಸ್ಮರಿಸಿದರು.
ಬೌದ್ಧ ಸಮ್ಮೇಳನದಲ್ಲಿ ‘ಭಾರತದ ಸಾಮಾಜಿಕ ಚಳವಳಿಗಳ ಮೇಲೆ ಬುದ್ಧರ ಚಿಂತನೆಗಳ ಪ್ರಭಾವ’ ಕುರಿತು ಉಪನ್ಯಾಸ ನೀಡಿದರು.
‘ಸಮಾಜದಲ್ಲಿ ಜಾತಿ- ಧರ್ಮಗಳ ಕಟ್ಟುಪಾಡನ್ನು ವಿರೋಧಿಸಿ ನಿಂತ, ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡ ಎಲ್ಲ ವ್ಯಕ್ತಿಗಳಿಗೆ ಬುದ್ಧ ಗುರುವಾಗಿದ್ದ. ವಿವೇಕಾನಂದರಂತಹ ಹಿಂದೂ ಧರ್ಮ ಪ್ರತಿಪಾದಕರಿಗೂ ಬುದ್ಧನ ಸಂದೇಶಗಳು ಹಿಡಿಸಿದ್ದವು’ ಎಂದು ವಿವರಿಸಿದರು.
‘ಭಾರತದ ಅನೇಕ ತಳ ಸಮುದಾಯಗಳ ಜನರು ಮೂಲತಃ ಬೌದ್ಧ ಧರ್ಮೀಯರೇ ಆಗಿದ್ದರು. ಗಾಂಧಿ, ಪೆರಿಯಾರ್, ಜ್ಯೋತಿಬಾ ಫುಲೆ, ಸಯ್ಯಾಜಿರಾವ್ ಗಾಯಕ ವಾಡ್ ಅವರಂತಹ ಅಸಂಖ್ಯ ಖ್ಯಾತನಾಮರನ್ನು ಬುದ್ಧ ಪ್ರಭಾವಿಸಿ ದ್ದಾರೆ. ವಿದೇಶಿಯರೂ ಈ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದರು. ಎಡ್ವಿನ್ ಅರ್ನಾಲ್ಡ್ ಎನ್ನುವ ವ್ಯಕ್ತಿ ಬುದ್ಧನನ್ನು ‘ಏಷ್ಯಾದ ಬೆಳಕು’ ಎಂದು ಬಣ್ಣಿಸಿದ್ದರು’ ಎಂದರು.
ಚಿಂತಕ ಡಿ.ಎಸ್. ವೀರಯ್ಯ, ‘ದಲಿತರು ಎದ್ದರೆ ಗೆದ್ದು ಬರುತ್ತಾರೆ ಹೊರತು ಸೋಲುವ ಸಂಸ್ಕೃತಿ ನಮ್ಮದಲ್ಲ ಎಂದು ಅಂಬೇಡ್ಕರ್ ತೋರಿಸಿದ್ದರು. ಹೋರಾಟ- ಸಂಘಟನೆ ನಮ್ಮ ಮೂಲ ಮಂತ್ರ. ಬಸವಲಿಂಗಪ್ಪ ಹೇಳುವಂತೆ ನಾವು ಕೇವಲ ದಲಿತರಲ್ಲ, ನಾವೆಲ್ಲ ಬುದ್ಧಿಸ್ಟ್‌ಗಳು. ಅಂಬೇಡ್ಕರ್ - ಬುದ್ಧನ ಆಶಯಗಳ ಈಡೇರಿಕೆಗೆ ಇದು ಪರಿಪಕ್ವ ಕಾಲ’ ಎಂದು ಹೇಳಿದರು.
ಕೊಳತ್ತೂರು ಬುದ್ಧವಿಹಾರದ ಸುಗಲಪಾಲ ಭಂತೇಜಿ ಸಾನ್ನಿಧ್ಯ ಹಾಗೂ ಸಾಮಾಜಿಕ ಚಿಂತಕಿ ಬಿ.ಟಿ. ಲಲಿತಾನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಒಂದು ಕಾಲದಲ್ಲಿ ಬುದ್ಧಮಯವಾಗಿದ್ದ ಭಾರತ ನಂತರ ಪ್ರತಿವಾದಿಗಳ ದಾಳಿಗೆ ಸಿಲುಕಿದೆ. ಆದರೆ ಅದರ ಬೀಜ ಹಾಗೆಯೇ ಇದ್ದು, ಅದನ್ನು ಬೆಳೆಸಬೇಕಿದೆಡಿ.ಎಸ್. ವೀರಯ್ಯ, ಚಿಂತಕ
ಮೈಸೂರು: ‘ವೇಶ್ಯೆಯನ್ನೂ ಗೌರವಿಸಿ ಬಿಕ್ಕು ಸ್ಥಾನ ನೀಡಿದ ಬುದ್ಧ ಗುರು ಹಾಗೂ ಸಂವಿಧಾನದ ಮೂಲಕ ಹೆಣ್ಣಿಗೆ ಸಮಾನ ಅವಕಾಶ ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅನ್ನು ಮಹಿಳೆಯರು ಹೆಚ್ಚು ಅರಿಯಬೇಕು’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಕೆ.ಜೆ.ಜಯಲಕ್ಷ್ಮಿ ನಾಯಕ ಹೇಳಿದರು.
ಬೌದ್ಧ ಸಮ್ಮೇಳನದ ಅಂಬೇಡ್ಕರ್ ವೇದಿಕೆಯಲ್ಲಿ ‘ಧಮ್ಮ ಮತ್ತು ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಮಹಿಳಾ ಆರ್ಥಿಕ ಸಬಲೀಕರಣ’ ಕುರಿತು ಮಾತನಾಡಿದರು. ‘ದಲಿತರು ಭೌದ್ಧ ಧಮ್ಮವನ್ನು ಮುನ್ನಡೆಸದೆ ಹಿಂದೂ ದೇಶವನ್ನಾಗಿಸುವ ಉದ್ದೇಶ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಭಾಗಿಯಾಗುತ್ತಿರುವುದು ಆತ್ಮಹತ್ಯಾ ನಡೆ’ ಎಂದು ಹೋರಾಟಗಾರ ಮೋಹನ್‌ರಾಜ್ ಬೇಸರಿಸಿದರು.
ಕಲಬುರಗಿಯ ಭೂಮಿ ಬುದ್ಧವಿಹಾರದ ಭಂತೆ ಅಮರಜ್ಯೋತಿ ಸಾನ್ನಿಧ್ಯ, ದಸಂಸ ಹೋರಾಟಗಾರ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು.
‘ಮಾಂಸಾಹಾರ ತ್ಯಜಿಸಿ ಎಂಬ ಕಟ್ಟಳೆಯನ್ನು ಬುದ್ಧ ಎಂದೂ ವಿಧಿಸಿಲ್ಲ. ವಿನೋದಕ್ಕಾಗಿ, ಅಗತ್ಯಕ್ಕೂ ಮೀರಿದ ಆಹಾರ ಆಸೆಗಾಗಿ ಹಿಂಸೆ ಮಾಡಬಾರದು ಎನ್ನುತ್ತದೆ ಆತನ ಧಮ್ಮ’ ಎಂದು ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜಯ್ಯ ಹೇಳಿದರು.
ಸಮ್ಮೇಳನದ ರಾಜ ಹರ್ಷವರ್ಧನ ವೇದಿಕೆಯಲ್ಲಿ ‘ಬೌದ್ಧ ಧಮ್ಮ ಮತ್ತು ಮಾಂಸಾಹಾರ’ ಕುರಿತು ಮಾತನಾಡಿದರು. ಜೇತವನ ಬುದ್ಧವಿಹಾರದ ಭಂತೆ ಮನೋರಕ್ಖಿತ ಅವರು ಸಾನ್ನಿಧ್ಯವನ್ನು, ಪ್ರೊ.ಕೆ.ಎಸ್.ಭಗವಾನ್ ಅಧ್ಯಕ್ಷತೆ ವಹಿಸಿದ್ದರು.
ನಳಂದಾ ವೇದಿಕೆ: ಧಮ್ಮಂ ನಮಾಮಿ, ಧಮ್ಮ ಸಾನ್ನಿಧ್ಯ– ಭಂತೆ ಮನೋರಕ್ಖಿತ, ಸಾರನಾಥ ಸ್ತಂಭಕ್ಕೆ ಧಮ್ಮ ನಮನ– ಭಂತೆ ಕಲ್ಯಾಣಸಿರಿ, ಧಮ್ಮ ಧ್ವಜಾರೋಹಣ– ಭಂತೆ ಬೋಧಿರತ್ನ, ತಿಸರಣ ಪಠಣ– ಭಂತೆ ಜ್ಞಾನಲೋಕ, ಪಂಚಶೀಲ ಪಠಣ– ಭಂತೆ ಸಂಘಮಿತ್ರೆ, ಅಷ್ಠಾಂಗ ಮಾರ್ಗಗಳ ಸಾರ– ಭಂತೆ ಜ್ಞಾನಸಾಗರ, ಮೌನ–ಧ್ಯಾನ, ಧಮ್ಮ ಧ್ಯಾನ ಸಂಗೀತ– ಪದ್ಮಪಾಣಿ ಲಲಿತಕಲಾ ಅಕಾಡೆಮಿ– ಬೆಳಿಗ್ಗೆ 8, ಸಂಘ ನಮಾಮಿ– ಸಾನ್ನಿಧ್ಯ–ಜ್ಞಾನಪ್ರಕಾಶ ಸ್ವಾಮೀಜಿ, ಉಪಸ್ಥಿತಿ– ಎಐಸಿಸಿಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉದ್ಘಾಟನೆ– ಸಿಎಂ ಸಿದ್ದರಾಮಯ್ಯ, ಉಪಸ್ಥಿತಿ– ಸಚಿವ ಜಿ.ಪರಮೇಶ್ವರ, ಅಧ್ಯಕ್ಷತೆ– ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬೆಳಿಗ್ಗೆ 11.20, ಸಾಂಸ್ಕೃತಿಕ ಸಂಗಮ– ಮಧ್ಯಾಹ್ನ 1.30, ಬುದ್ಧಂ– ಧಮ್ಮಂ– ಸಂಘಂ ನಮಾಮಿ, ಸಮಾರೋಪ, ಸಾನ್ನಿಧ್ಯ– ಭಂತೆ ಕರ್ಮ ರಾನ್ರಿಯೋನ್ ಪುಂಚೆ, ಅಧ್ಯಕ್ಷತೆ– ಭಂತೆ ರಾಂಡಿ ಸಾಟೋ, ಭಾಷಣ– ಪ್ರಕಾಶ್ ರಾಜ್, ನಟರಾಜ್ ಬೂದಾಳ್, ಧರಣಿದೇವಿ ಮಾಲಗತ್ತಿ, ಸಂಗೀತ ನಮನ, ವಿವಿಧ ವೇದಿಕೆಗಳಲ್ಲಿ ಗೋಷ್ಠಿ– ಬೆಳಿಗ್ಗೆ 9.30ರಿಂದ ಸಂಜೆ 4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.