ಮೈಸೂರು: ‘ಮಧುಬಲೆ (ಹನಿಟ್ರ್ಯಾಪ್)ಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ. ಅವರೇ ನಿಜವಾದ ಕಿಂಗ್‌ಪಿನ್’ ಎಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಆರೋಪಿಸಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಧುಬಲೆಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾತ್ರವಿಲ್ಲ’ ಎಂದು ಹೇಳಿದರು. ‘ಎಲ್ಲದಕ್ಕೂ ಕಾಂಗ್ರೆಸ್‌ನವರತ್ತ ಬೊಟ್ಟು ಮಾಡುವುದು ಬಿಜೆಪಿಯವರ ಹುಟ್ಟುಗುಣ’ ಎಂದು ಟೀಕಿಸಿದರು.
‘ನಾನೂ ಆರು ತಿಂಗಳ ಹಿಂದೆಯೇ ಮಧುಬಲೆಯ ಬಗ್ಗೆ ದೂರು ನೀಡಿದ್ದೆ. ಮೈಸೂರು ಭಾಗದ ಹಲವರನ್ನು ಸಿಲುಕಿಸಲಾಗಿತ್ತು. ಸಾಮಾನ್ಯ ಜನರು, ಪ್ರೊಫೆಸರ್, ಕೈಗಾರಿಕೋದ್ಯಮಿಗಳನ್ನು ಗುರಿ ಮಾಡಿದ್ದರು. ಈಗ, ಶಾಸಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬ ಮನುಷ್ಯನನ್ನು ಮಣಿಸಲು ವಾಮಮಾರ್ಗ ಅನುಸರಿಸಬಾರದು. ದಿನನಿತ್ಯದ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ನಾನು ಸಮರ ಸಾರಿದ್ದೆ’ ಎಂದರು.
‘ಮುನಿರತ್ನನೇ ಕೇಡಿ. ಅವನು ಬೇರೊಬ್ಬರ ಬಗ್ಗೆ ಆಪಾದಿಸುವುದು ಸರಿಯಲ್ಲ. ಆತನನ್ನು ಕಂಡರೆ ನನಗೆ ಭಯವಾಗುತ್ತದೆ. ಸದನದಲ್ಲಿ ಎಲ್ಲಿ ಎಚ್‌ಐವಿ ಇಂಜೆಕ್ಷನ್ ಮಾಡಿಬಿಡುತ್ತಾನೋ ಎಂಬ ಭಯವಿದೆ. ಆತ ಹಲವರಿಗೆ ಎಚ್‌ಐವಿ ಇಂಜೆಕ್ಷನ್ ಕೊಡಲು ಹೋಗಿದ್ದ. ಹಲವರ ಸಿ.ಡಿ ಮಾಡಿಸಿಟ್ಟುಕೊಂಡಿದ್ದಾನೆ’ ಎಂದು ದೂರಿದರು.
‘ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಗೆ ಉಳಿಗಾಲವಿಲ್ಲ. ಯಾವ ಪರಿಸ್ಥಿತಿಗಾದರೂ ರಾಜಕಾರಣ ಹೋಗಬಹುದು. ಆರೋಗ್ಯಕರವಲ್ಲದ ಬೆಳವಣಿಗೆ ಅಸಹ್ಯ ಹುಟ್ಟಿಸಿದೆ. ರಾಜಕಾರಣವೇ ಬೇಡ ಅನಿಸುತ್ತಿದೆ. ರಾಜಕಾರಣವೆಂದರೆ ಕೊಚ್ಚೆಯಲ್ಲಿ ಬಿದ್ದ ಅನುಭವ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.