ಮೈಸೂರು: ರಾಜ್ಯದ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳಲ್ಲಿ ಒಂದಾದ ಹಾಗೂ ಗೊಲ್ಲ ಸಮಾಜದ ಉಪ ಪಂಗಡವಾದ ‘ಗೋಪಾಲ’ (ಗೋಪಾಲ್) ಜಾತಿಯ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾಲಯಕ್ಕೆ ವಹಿಸಿದೆ.
ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಸಮಾಜವಿಜ್ಞಾನ ವಿಭಾಗದ ಪ್ರೊ.ರೇಖಾ ಜಾಧವ್ ಅಧ್ಯಯನದ ನೇತೃತ್ವ ವಹಿಸಲಿದ್ದು, ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಡಿ.ಸಿ.ನಂಜುಂಡ ಸಹ ಸಂಶೋಧಕರಾಗಿರಲಿದ್ದಾರೆ. ಈ ಸಮಾಜದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಂಶೋಧನೆ ನಡೆಸಲಾಗುತ್ತಿದೆ.
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಯೋಜನೆಯನ್ನು ಪ್ರಾಯೋಜಿಸಿದ್ದು, ₹13 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಅಧ್ಯಯನದ ಪೂರ್ವಸಿದ್ಧತೆಗಳು ನಡೆದಿವೆ.
ವಿವಿಧ ಜಿಲ್ಲೆಗಳಲ್ಲಿ: ‘ಸಂಸ್ಥೆಯು 10ರಿಂದ 12 ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೆತ್ತಿಕೊಂಡಿದ್ದು, ‘ಗೋಪಾಲ’ ಸಮುದಾಯವೂ ಸೇರಿದೆ. ಸದ್ಯ ಈ ಸಮಾಜದವರನ್ನು ರಾಜ್ಯದ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾಗಿ ಗುರುತಿಸಲಾಗಿದೆ’ ಎನ್ನುತ್ತಾರೆ ಪ್ರೊ.ರೇಖಾ ಜಾಧವ್.
ಈ ಜಾತಿಯು ಮೂಲತಃ ಅರೆ ಅಲೆಮಾರಿ ಸಮುದಾಯ. ಇವರು ಒಡಿಶಾ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ವಲಸೆ ಬಂದವರು. ಕೆಲವೆಡೆ ಇವರನ್ನು ‘ಯಾದವರು’ ಎಂದು ಕರೆಯಲಾಗುತ್ತದೆ. ರಾಜ್ಯದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿದ್ದಾರೆ.
‘ಸಮುದಾಯದ ಇತಿಹಾಸ, ವಲಸೆ, ಸಂಸ್ಕೃತಿ, ಚಲನಶೀಲತೆ, ಅನನ್ಯತೆ ಮೊದಲಾದ ಅಂಶಗಳ ಬಗ್ಗೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಕುರಿತು ಅಧ್ಯಯನ ನಡೆಸಲಾಗುವುದು. ವಿಚಾರಸಂಕಿರಣ, ಸಮೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯೂ ಅಧ್ಯಯನದ ಭಾಗವಾಗಿರಲಿದೆ’ ಎಂದು ರೇಖಾ ಮಾಹಿತಿ ನೀಡಿದರು.
‘ಗೋಪಾಲ ಸಮುದಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಅತ್ಯಂತ ಅಲಕ್ಷಿತ ಅಲೆಮಾರಿ ಸಮುದಾಯ. ಪ್ರಸ್ತುತ ಅಧ್ಯಯನವು ಈ ಸಮುದಾಯದ ಒಳಗೊಳ್ಳುವಿಕೆಯ ಬೆಳವಣಿಗೆಗೆ ನೆರವಾಗಲಿ ಎಂಬ ಆಶಯ ನಮ್ಮದು’ ಎಂದು ಡಿ.ಸಿ. ನಂಜುಂಡ ಪ್ರತಿಕ್ರಿಯಿಸಿದರು.
ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವ ಹಿಂದುಳಿದ ಅರೆ ಅಲೆಮಾರಿ ಸಮುದಾಯಗಳಲ್ಲೊಂದು
ಈ ಕುಲಶಾಸ್ತ್ರೀಯ ಅಧ್ಯಯನವನ್ನು 18ರಿಂದ 24 ತಿಂಗಳೊಳಗೆ ಮುಗಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದುಪ್ರೊ.ರೇಖಾ ಜಾಧವ್ ಮಹಾರಾಜ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.