ಮೈಸೂರು: 2010ರಲ್ಲಿ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿದ್ದ ಮೂಲೆ ನಿವೇಶನವನ್ನು 2024ರಲ್ಲಿ ಮತ್ತೊಬ್ಬರಿಗೆ ಹಂಚಿಕೆ ಮಾಡಿದ ಆರೋಪ ಮುಡಾ ವಿರುದ್ಧ ಕೇಳಿಬಂದಿದ್ದು, ತಮ್ಮ ನಿವೇಶನ ವಾಪಸ್ ಕೊಡಿಸುವಂತೆ ಸಂತ್ರಸ್ಥ ವ್ಯಕ್ತಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ.
ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಹಾಗೂ ಸಿಇಒ ಡಾ. ವಿ. ನಾರಾಯಣ ಸ್ವಾಮಿ ದೂರು ಸಲ್ಲಿಸಿದವರು. ‘ನಾನು ಖರೀದಿಸಿದ್ದ ನಿವೇಶನದ ಅರ್ಧಭಾಗ ಅನ್ಯರ ಪಾಲಾಗಿದ್ದು, ಮುಡಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕೂಡಲೇ ಕಾನೂನುಬಾಹಿರ ಹಂಚಿಕೆಯನ್ನು ರದ್ದುಗೊಳಿಸಿ ನಿವೇಶನವನ್ನು ವಾಪಸು ಕೊಡಿಸಿ’ ಎಂಬುದು ಅವರ ಅಹವಾಲು.
ಹಿನ್ನೆಲೆ: ವಿಜಯನಗರ ಮೂರನೇ ಹಂತದ ಎ ಬ್ಲಾಕ್‌ನಲ್ಲಿ 222 ಸಂಖ್ಯೆಯ, 21X19 ಮೀಟರ್ (4,148 ಚದರ ಅಡಿ) ವಿಸ್ತೀರ್ಣದ ಮೂಲೆ ನಿವೇಶನವನ್ನು ಡಾ. ಕೆ.ಎ. ರಾಮೇಗೌಡ ಎಂಬುವರು 2010ರ ಜೂನ್ 2ರಂದು ಹರಾಜಿನಲ್ಲಿ ಮುಡಾದಿಂದ ಖರೀದಿಸಿದ್ದರು. ನಂತರ ಅವರ ಹೆಸರಿಗೆ ಖಾತೆಯಾಗಿತ್ತು. ಅದೇ ನಿವೇಶನವನ್ನು ರಾಮೇಗೌಡರಿಂದ ವಿ. ನಾರಾಯಣಸ್ವಾಮಿ ಅವರು 2016ರ ನವೆಂಬರ್ 26ರಂದು ಖರೀದಿಸಿದ್ದು, ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಮಾಡಿಕೊಂಡಿದ್ದರು.
‘ಅದೇ ನಿವೇಶನಕ್ಕೆ ಮುಡಾ ಅಧಿಕಾರಿಗಳು 2024ರ ಮೇ 14ರಂದು 222/ಎ ಎಂದು ಹೊಸ ನಿವೇಶನ ಸಂಖ್ಯೆ ಸೃಷ್ಟಿಸಿ, ಜಮೀನು ಕಳೆದುಕೊಂಡವರಿಗೆ ನೀಡುವ ಪ್ರೋತ್ಸಾಹ ನಿವೇಶನ ರೂಪದಲ್ಲಿ 40X60 ಅಡಿ ಅಳತೆಯ ನಿವೇಶನವನ್ನು ಮಹದೇವು ಎಂಬುವರಿಗೆ ಮಂಜೂರು ಮಾಡಿ, ಖಾತೆಯನ್ನೂ ಮಾಡಿಕೊಟ್ಟಿದ್ದಾರೆ. ಸದರಿ ನಿವೇಶನವನ್ನು ಮಹದೇವು ಅದೇ ವರ್ಷ ಜೂನ್‌ನಲ್ಲಿ ಸತೀಶ್ ಎಂಬುವರಿಗೆ ಮರು ಮಾರಾಟ ಮಾಡಿದ್ದು, ಸತೀಶ್ ಅದಕ್ಕೆ ಮಹಾನಗರ ಪಾಲಿಕೆಯಿಂದ ಖಾತೆ ಪಡೆದು ಕಟ್ಟಡ ನಿರ್ಮಿಸಿದ್ದಾರೆ’ ಎಂದು ಅವರು ದೂರಿದ್ದಾರೆ.
‘ಆರು ತಿಂಗಳ ಹಿಂದೆ ಬಂದಾಗ ನಿವೇಶನ ಖಾಲಿ ಇತ್ತು. ಈಗ ನೋಡಿದರೆ ಅಲ್ಲಿಯೇ ಕಟ್ಟಡ ತಲೆ ಎತ್ತಿದೆ. ನಮ್ಮ ನಿವೇಶನದ ಅರ್ಧಭಾಗವನ್ನೇ ಹಂಚಿಕೆ ಮಾಡಿದ್ದು, ನಮ್ಮದೇ ಚೆಕ್‌ಬಂದಿ ಬಳಸಲಾಗಿದೆ’ ಎಂದು ಆರೋಪಿಸಿದ್ದಾರೆ.
‘ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ ಪ್ರಕರಣ ಸಾಕಷ್ಟು ಸದ್ದು ಮಾಡಿದ್ದು, ಇದೀಗ ಹರಾಜು ಮಾಡಿದ ನಿವೇಶನವನ್ನೇ ಇನ್ನೊಬ್ಬರಿಗೆ ಮಂಜೂರು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.
ಹರಾಜು ನಿವೇಶನವನ್ನು ಮತ್ತೊಬ್ಬರಿಗೆ ಮಂಜೂರು ಮಾಡಿರುವ ಕುರಿತು ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ-ಎ.ಎನ್. ರಘುನಂದನ್, ಮುಡಾ ಆಯುಕ್ತ
ಸರ್ಕಾರಿ ಸಂಸ್ಥೆಯೇ ನಿವೇಶನದಾರರಿಗೆ ಹೀಗೆ ವಂಚಿಸಿದರೆ ಹೇಗೆ? ಸದ್ಯ ದೂರು ನೀಡಿದ್ದು ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ-ಡಾ. ವಿ. ನಾರಾಯಣಸ್ವಾಮಿ, ದೂರುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.