ADVERTISEMENT

ಅರ್ಜುನ ಆನೆ ಪ್ರಶಸ್ತಿ: ಮತ್ತಿಗೋಡು ಆನೆ ಶಿಬಿರದಲ್ಲಿ ಸಂಭ್ರಮ

ಎಚ್.ಎಸ್.ಸಚ್ಚಿತ್
Published 3 ಆಗಸ್ಟ್ 2025, 0:15 IST
Last Updated 3 ಆಗಸ್ಟ್ 2025, 0:15 IST
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಭೀಮಾ ಆನೆಯೊಂದಿಗೆ ಮಾವುತ ಗುಂಡು ಮತ್ತು ಕಾವಾಡಿಗ ನಂಜುಂಡಸ್ವಾಮಿ ಪಾಲನೆಯಲ್ಲಿ ತೊಡಗಿರುವ ದೃಶ್ಯ
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಭೀಮಾ ಆನೆಯೊಂದಿಗೆ ಮಾವುತ ಗುಂಡು ಮತ್ತು ಕಾವಾಡಿಗ ನಂಜುಂಡಸ್ವಾಮಿ ಪಾಲನೆಯಲ್ಲಿ ತೊಡಗಿರುವ ದೃಶ್ಯ   

ಹುಣಸೂರು: ನಾಗರಹೊಳೆ ಹುಲಿ ಯೋಜನೆ ವಿಭಾಗಕ್ಕೆ ಸೇರಿದ ಮತ್ತಿಗೋಡು ಆನೆ ಶಿಬಿರದ ಆನೆ ‘ಭೀಮ’ನ (25) ಮಾವುತ ಗುಂಡು ಹಾಗೂ ಕಾವಾಡಿಗ ನಂಜುಂಡಸ್ವಾಮಿ ‘ಆರ್ಜುನ ಆನೆ’ ಹೆಸರಿನ ಮೊದಲ ಪ್ರಶಸ್ತಿಗೆ ಆಯ್ಕೆಯಾಗಿರುವುದು ಶಿಬಿರದ ಸಿಬ್ಬಂದಿಯಲ್ಲಿ ಸಂತಸ ತಂದಿದೆ. ದಸರಾ ಉತ್ಸವ ಆರಂಭವಾಗುವ ಹೊತ್ತಿನಲ್ಲೇ ಪ್ರಶಸ್ತಿ ಘೋಷಣೆಯಾಗಿರುವುದು ಸಂಭ್ರಮವನ್ನು ಹೆಚ್ಚಿಸಿದೆ. 

ಆ.4 ರ ಸೋಮವಾರ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯ ಗಜಪಯಣ ಶುರುವಾಗುವ ವೇಳೆಯಲ್ಲೇ ಪ್ರಶಸ್ತಿ ನೀಡಲು ಸಿದ್ಧತೆ ನಡೆದಿದೆ.

ಭೀಮ ಆನೆಯ ಮಾವುತ ಗುಂಡು

ಭೀಮ ಆನೆಯ ಮಾವುತ ಗುಂಡು ಎರಡನೇ ಬಾರಿಗೆ ಸರ್ಕಾರಿ ಗೌರವಕ್ಕೆ ಪಾತ್ರರಾಗಿದ್ದು ಅವರ ಸಂತೋಷ ಇಮ್ಮಡಿಸಿದೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ಉತ್ತಮ ಮಾವುತ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಅದರ ಬೆನ್ನಲ್ಲೆ ಅರ್ಜುನ ಆನೆ ಪ್ರಶಸ್ತಿ ಲಭಿಸಿದ್ದು, ನಮ್ಮ ವೃತ್ತಿಯನ್ನು ಸರ್ಕಾರ ಗೌರವಿಸಿದ್ದಕ್ಕೆ ಸಂತೋಷವಾಗಿದೆ’ ಎಂದರು.

ADVERTISEMENT

‘ಅರಣ್ಯ ಇಲಾಖೆಗೆ ಬೀಟ್‌ ವಾಚರ್‌ ಹುದ್ದೆಗೆ ಸೇರಿ ಹಲವು ವರ್ಷಗಳ ಬಳಿಕ ಆನೆ ಪಾಲನೆಗೆ ಅವಕಾಶ ಸಿಕ್ಕಿತು. ನನ್ನ ತಾತ ಕುಳ್ಳಯ್ಯ ಮೇರಿ ಆನೆ ಮಾವುತರಾಗಿದ್ದರು. ಅವರಿಂದ ಆನೆ ಪಾಲನೆ ಕುರಿತ ಪಾಠಗಳನ್ನು ಕಲಿತೆ. ಇಲಾಖೆ ನನ್ನ ಅನುಭವ ಪರಿಗಣಿಸಿ ಹೆಣ್ಣಾನೆ ವರಲಕ್ಷ್ಮಿ ಮಾವುತನಾಗಿ ನಿಯೋಜಿಸಿತು. 2 ವರ್ಷದ ಬಳಿಕ ಗಂಡಾನೆ ದ್ರೋಣನನ್ನು 2 ವರ್ಷ ಪಾಲನೆ ಮಾಡಿ ಮೈಸೂರು ದಸರಾದಲ್ಲಿ ಭಾಗವಹಿಸಿದ್ದೆ. ದ್ರೋಣ ಹೃದಯಾಘಾತದಿಂದ ಸಾವನ್ನಪ್ಪಿದ್ದು, ನಂತರ ಕೃಷ್ಣ, 5 ವರ್ಷದಿಂದ ಭೀಮ ಆನೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ’ ಎಂದು ಗುಂಡು ಹೇಳಿದರು.

ಕಾವಾಡಿಗ ನಂಜುಂಡಸ್ವಾಮಿ ಮಾತನಾಡಿ, ‘ಮೂರು ವರ್ಷದಿಂದ ಭೀಮ ಆನೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದು, ಈ ಹಿಂದೆ ಗಂಗೆ, ಮಣಿಕಂಠ ಆನೆಯ ಕಾವಾಡಿಗ ಹುದ್ದೆ ನಿರ್ವಹಿಸಿದ್ದೆ. ಭೀಮ ಆನೆ ಜೊತೆಗೆ ಹಲವು ಕಾರ್ಯಾಚರಣೆಯಲ್ಲಿ ತೊಡಗಿದ್ದೇನೆ. ಭೀಮ ಆನೆಯ ದೈನಂದಿನ ಆಹಾರ ಮತ್ತು ಉಪಚಾರವನ್ನು ಎಚ್ಚರಿಕೆಯಿಂದ ನಿರ್ವಹಿಸುವಲ್ಲಿ ಖುಷಿ ಸಿಕ್ಕಿದೆ. ಭೀಮ ಆನೆಯ ಕಾವಾಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದರೊಂದಿಗೆ ಪ್ರಶಸ್ತಿಯೂ ಸಿಕ್ಕಿರುವುದು ಮತ್ತಷ್ಟು ಸಂತಸ ತಂದಿದೆ’ ಎಂದು ಹೇಳಿದರು.

ಆನೆ ಅರ್ಜುನ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯು ಮತ್ತಿಗೋಡು ಆನೆ ಶಿಬಿರದ ಭೀಮ ಆನೆ ಮಾವುತ ಮತ್ತು ಕಾವಾಡಿಗಗೆ ಲಭಿಸಿದ್ದು ಕ್ಯಾಂಪ್‌ ಹಿರಿಮೆ ಹೆಚ್ಚಿಸಿದೆ
ದೇವರಾಜ್‌ ಮತ್ತಿಗೋಡು ಆನೆ ಶಿಬಿರದ ವಲಯ ಅರಣ್ಯಾಧಿಕಾರಿ

ಹುಲಿ ಭಯವಿಲ್ಲದ ‘ಭೀಮ’ 

‘80 ಆನೆ ಕಾರ್ಯಾಚರಣೆ ಮತ್ತು 15 ಹುಲಿ ಕಾರ್ಯಾಚರಣೆಯಲ್ಲಿ ಭೀಮ ಭಾಗವಹಿಸಿದ್ದು ಈ ಎಲ್ಲಾ ಕಾರ್ಯಾಚರಣೆಗಳು ಯಶಸ್ವಿಯಾಗಿ ನಡೆಸಿ ಪುಂಡಾನೆಯನ್ನು ಬಂಧಿಸಿದೆ. ಇದಲ್ಲದೆ ಹುಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಭೀಮ ಆನೆಗೆ ಹುಲಿ ಭಯವಿಲ್ಲ’ ಎಂದು ಅದರ ಮಾವುತ ಗುಂಡು ಹೇಳಿದರು. ‘ನಾಗರಹೊಳೆ ಹುಲಿ ಯೋಜನೆ ವಿಭಾಗದ ಮತ್ತಿಗೋಡು ಆನೆ ಶಿಬಿರದ ಭೀಮ ವಿಶಿಷ್ಟವಾಗಿದ್ದು ಭವಿಷ್ಯದ ಅಂಬಾರಿ ಆನೆಯಾಗುವ ಲಕ್ಷಣವಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಪುಂಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿ ಯಶಸ್ವಿಯಾಗಿದ್ದು ಅರ್ಜುನ ಆನೆ ಪ್ರಶಸ್ತಿ ಶಿಬಿರದ ಇತರೆ ಸಿಬ್ಬಂದಿಗೆ ಪ್ರೇರಣೆಯಾಗಿದೆ’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕಿ ಸೀಮಾ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.