ADVERTISEMENT

‘ಯುವ ಸಮುದಾಯಕ್ಕೆ ಯೋಧರೇ ಮಾದರಿ’

ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಕರೆ l ಕಾನೂನು ಸೇವೆಗಳ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 3:02 IST
Last Updated 3 ಆಗಸ್ಟ್ 2021, 3:02 IST
ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ‘ಕಾನೂನು ಸೇವೆಗಳ ಕೇಂದ್ರ’ ಉದ್ಘಾಟಿಸಿದರು. ಕೆ.ಎಸ್.ಸುರೇಶ್, ಎಂ.ಎಲ್.ರಘುನಾಥ್, ದೇವರಾಜಭೂತೆ ಇದ್ದಾರೆ
ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ‘ಕಾನೂನು ಸೇವೆಗಳ ಕೇಂದ್ರ’ ಉದ್ಘಾಟಿಸಿದರು. ಕೆ.ಎಸ್.ಸುರೇಶ್, ಎಂ.ಎಲ್.ರಘುನಾಥ್, ದೇವರಾಜಭೂತೆ ಇದ್ದಾರೆ   

ಮೈಸೂರು: ಯುವ ಸಮುದಾಯವು ಸಿನಿಮಾ ನಟರು, ಕ್ರಿಕೆಟ್‌ ತಾರೆಗಳಿಗಿಂತ ಹೆಚ್ಚಾಗಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸೈನಿಕರನ್ನು ತಮ್ಮ ಮಾದರಿಗಳನ್ನಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಕರೆ ನೀಡಿದರು.

ಇಲ್ಲಿನ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಅವರು ‘ಕಾನೂನು ಸೇವೆಗಳ ಕೇಂದ್ರ’ ಉದ್ಘಾಟಿಸಿ ಮಾತನಾಡಿದ ಅವರು, ‘ತಾರೆಯರು ಪರದೆಯ ಮೇಲೆ ಮಾತ್ರ ನಾಯಕರು. ಆದರೆ, ಗಡಿ ಕಾಯುವ ನಮ್ಮ ಯೋಧರು ನಿಜಕ್ಕೂ ನಮ್ಮ ನಾಯಕರಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕಠಿಣ ಕಾನೂನುಗಳನ್ನು ರಚಿಸಿದಾಗ್ಯೂ ಭ್ರಷ್ಟಾಚಾರ, ಜಾತೀಯತೆ, ವರದಕ್ಷಿಣೆ, ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಕಾನೂನು ಜಾರಿ ಸಮರ್ಪಕವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ದೇಶಕ್ಕಾಗಿ ನಾವು ಏನಾದರೂ ಮಾಡಬೇಕು. ನಾನಿನ್ನು ವಿದ್ಯಾರ್ಥಿ ಏನು ಮಾಡಲು ಸಾಧ್ಯ ಎಂಬ ಅಸಡ್ಡೆ ತೋರಬಾರದು. ವಿದೇಶಿ ಕಂಪನಿಯ ತಂಪು ಪಾನೀಯಕ್ಕೆ ಬದಲಾಗಿ ಎಳನೀರು, ಕಬ್ಬಿನಹಾಲು, ಹಣ್ಣಿನ ಪಾನೀಯಗಳನ್ನು ಬಳಕೆ ಮಾಡಿದರೆ ವಿದೇಶಕ್ಕೆ ಹೋಗುವ ಲಾಭವನ್ನು ತಡೆಯುವ ಮೂಲಕ ದೇಶಸೇವೆ ಮಾಡಬಹುದು’ ಎಂದರು.

‘ವಕೀಲರು ಪ್ರಾಮಾಣಿಕತೆಯಿಂದ ಇರಬೇಕು. ನಾವು ಹತ್ತು ಜನರ ಕಣ್ಣೀರು ಒರೆಸಿದರೆ ನಮ್ಮ ಕಣ್ಣಿನಲ್ಲಿ ನೀರು ಬಾರದಂತೆ ಭಗವಂತ ತಡೆಯುತ್ತಾನೆ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.