ಮೈಸೂರು: ‘ಕಷ್ಟದ ಸಂದರ್ಭ ಮೀರುವ ಶಕ್ತಿಯನ್ನು ಕಲೆ– ಸಾಹಿತ್ಯ ನೀಡುತ್ತವೆ. ಸೃಜನಶೀಲತೆಯನ್ನು ಬರಹದಲ್ಲೊ, ಕುಂಚದಲ್ಲೋ ಅಭಿವ್ಯಕ್ತಿಸುವ ಕೆಲಸ ಮಾಡಬೇಕು. ಅದೇ ಬಿಡುಗಡೆಯ ದಾರಿ, ಕಾಣುವ ಬೆಳಕು’ ಎಂದು ಚಲನಚಿತ್ರ ನಿರ್ದೇಶಕ ಮಂಸೋರೆ ಪ್ರತಿಪಾದಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಪತ್ರಕರ್ತ ಕೆ.ಕೆ.ಕಾರ್ತಿಕ್ ಅವರ ‘ಕಹಾನಿ’ ಕಥಾ ಸಂಕಲನವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿ, ‘ಆಸ್ಪತ್ರೆಯಲ್ಲಿ ತಂದೆ ಚಿಕಿತ್ಸೆ ಪಡೆಯುತ್ತಿದ್ದಾಗ ನಾನು ಚಿತ್ರಗಳನ್ನು ಬರೆಯುತ್ತಿದ್ದೆ. ದುಗುಡಗಳಿಂದ ಆಚೆ ಬರುವ ಶಕ್ತಿ ಕೊಟ್ಟಿತ್ತು. ಅವರು ಹುಶಾರಾಗುವರೆಂಬ ಭರವಸೆ ಹುಟ್ಟಿಸಿತ್ತು’ ಎಂದು ನೆನೆದರು.
‘ಸುತ್ತಲ ಜಗತ್ತಿನ ಘಟನೆ, ಪಾತ್ರಗಳಿಗೆ ಚೌಕಟ್ಟು ನೀಡಿ ಚಿಂತನೆ ದಾಟಿಸುವ ಜವಾಬ್ದಾರಿ ಸೃಜನಶೀಲರಿಗೆ ಇರಬೇಕು. ಕಥೆಗಾರರು ದಕ್ಕಿದ ಅನುಭವವನ್ನು ಕಥೆಯಾಗಿಸಲು ಕೌಶಲ ಬೇಕು. ಈಗಿನವರಲ್ಲಿ ಅನುಭವದ ಮೂಲದ್ರವ್ಯ ಕಡಿಮೆಯಾಗಿದೆ. ಆದರೆ, ಕಹಾನಿ ಕೃತಿಕಾರರ 20 ಕಥೆಗಳೂ ಸಿನಿಮಾ ಆಗಿಸುವ ಸಾರ ಹೊಂದಿವೆ. ಇಂಗ್ಲಿಷ್ ಕೃತಿಯಾದರೂ ಜೀವನಕ್ಕೆ ಬೇಕಾದ ಕನ್ನಡದ ಪರಿಸರದ ಕಥೆಗಳು ಇವಾಗಿವೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ‘ಪತ್ರಕರ್ತರು ಸಣ್ಣಕಥೆ ಬರೆಯುವುದು ಸುಲಭವಲ್ಲ. ರಾತ್ರಿ 9 ಗಂಟೆ ಒಳಗೆ ಸುದ್ದಿ ನೀಡಬೇಕೆಂಬ ಧಾವಂತದಲ್ಲಿ ಇರುತ್ತಾರೆ. ಕಥೆ ಬರೆಯಲು ತಾಳ್ಮೆ ಬೇಕು. ಇಲ್ಲಿನ ಕಥೆಗಳು ಹೊಸದಾಗಿ ಬರೆಯುವವರಿಗೆ ಸ್ಫೂರ್ತಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.
ಲೇಖಕಿ ಶುಭಾ ಸಂಜಯ್ ಅರಸ್, ‘ಇಲ್ಲಿನ ಕಥೆಗಳಲ್ಲಿ ನವರಸವಿದೆ. ಹಲವು ಕಥೆಗಳು ಚಿಂತನೆಗೆ ಹತ್ತಿಸುತ್ತವೆ. ಕಾಡುತ್ತವೆ’ ಎಂದರು.
ಹರಿಣಿ ನಿವೇದಿತಾ ನಿರೂಪಿಸಿದರು, ಅಪೂರ್ವ ಕಿರಣ್ ಪ್ರಾರ್ಥಿಸಿದರು. ಕೃತಿಯ ಲೇಖಕ ಕೆ.ಕೆ.ಕಾರ್ತಿಕ್, ಜಿ.ಡಿ.ಪದ್ಮಾವತಿ ಪಾಲ್ಗೊಂಡಿದ್ದರು.
ಪುಸ್ತಕ ಪರಿಚಯ
ಕೃತಿ: ಕಹಾನಿ
ಲೇಖಕ: ಕಾರ್ತಿಕ್ ಕೆ.ಕೆ
ಪ್ರಕಾರ: ಕಥಾ ಸಂಕಲನ
ಪುಟ: 108
ಬೆಲೆ: ₹ 200
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.