ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯಲ್ಲಿರುವ ಮನೋವಿಜ್ಞಾನ ವಿಭಾಗದ ನೋಟ
–ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿರುವ ಮನೋವಿಜ್ಞಾನ ವಿಭಾಗವು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಇತಿಹಾಸದ ಪುಟಗಳ ಮೇಲೆ ಚಾರಿತ್ರಿಕ ಮೈಲಿಗಲ್ಲನ್ನು ನೆಟ್ಟಿದೆ. ಮನೋವಿಜ್ಞಾನದ ವಿಷಯದಲ್ಲಿ ಶೈಕ್ಷಣಿಕ, ಸಂಶೋಧನೆ ಮತ್ತು ವೃತ್ತಿಪರ ಶ್ರೇಷ್ಠತೆ ದೊರಕಿಸಿಕೊಡುವಲ್ಲಿ ‘ದಾರಿದೀಪ’ವಾಗಿ ಬೆಳಗುತ್ತಿದೆ.
ಈ ವಿಭಾಗವು, ಮೈಸೂರಿಗೆ ಆಕಾಶವಾಣಿಯನ್ನು ಪರಿಚಯಿಸಿದ ಎಂ.ವಿ.ಗೋಪಾಲಸ್ವಾಮಿ ಅವರ ಕೊಡುಗೆಯೂ ಹೌದು. 1924ರಲ್ಲಿ ಸ್ಥಾಪನೆಯಾದ ದಿನದಿಂದ ಶೈಕ್ಷಣಿಕ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದೆ.
ನಗರದ ಮಹಾರಾಜ ಕಾಲೇಜಿನಲ್ಲಿ ಸ್ಥಾಪನೆಯಾದ ಈ ವಿಭಾಗಕ್ಕೆ, ದೇಶದ 2ನೇ ಅತ್ಯಂತ ಹಳೆಯ ಮನೋವಿಜ್ಞಾನ ವಿಭಾಗ ಎಂಬ ಹೆಗ್ಗಳಿಕೆಯ ಹಿರಿಮೆಯ ಗರಿ ಇದೆ. ಆಗ ಪಠ್ಯಕ್ರಮದಲ್ಲಿ ಮನೋವಿಜ್ಞಾನದ ವಿಷಯ ಸೇರ್ಪಡೆಗೊಳಿಸಿದ ಖ್ಯಾತಿಯೂ ಮೈಸೂರು ವಿಶ್ವವಿ ದ್ಯಾಲಯಕ್ಕೆ ಸಂದಿತ್ತು. ಮನೋ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲಾಗುತ್ತಿತ್ತು. ಇದಕ್ಕಾಗಿ ಮಹಾರಾಜ ಕಾಲೇಜಿನಲ್ಲೇ ಮನೋವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸಲಾಯಿತು ಮತ್ತು 1960 ರವರೆಗೆ ಅದೇ ಕಾಲೇಜಿನಲ್ಲಿ ಬೋಧಿಸಲಾಗುತ್ತಿತ್ತು. ಯುಜಿಸಿ ಬಂದ ಬಳಿಕ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರತ್ಯೇಕಗೊಳಿಸಿ ವಿಶ್ವ ವಿದ್ಯಾಲಯದಿಂದ ಹೊಸದಾಗಿ ರಚಿಸಲಾದ ಕ್ಯಾಂಪಸ್‌ನಲ್ಲಿ ‘ಮನೋ ವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ’ ಸ್ಥಾಪಿಸಲಾಯಿತು.
ಹಲವರ ಕೊಡುಗೆ...: ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಬಿ.ಕುಪ್ಪುಸ್ವಾಮಿ ಮತ್ತು ಪ್ರೊ.ಬಿ. ಕೃಷ್ಣನ್ ವಿಭಾಗವನ್ನು ದೀರ್ಘಕಾಲದವರೆಗೆ ನಡೆಸಿ ವೈಭವವನ್ನು ಮುಂದುವರಿಸಿದರು. ‘ಸೈಕಲಾಜಿಕಲ್ ಸ್ಟಡೀಸ್ ಜರ್ನಲ್’ ಆರಂಭಿಸಿ ಸಂಪಾದಕರೂ ಆಗಿದ್ದವರು ಪ್ರೊ.ಕೃಷ್ಣನ್. ಇದು, ಈಗ ಅತ್ಯಂತ ಪ್ರಸಿದ್ಧ ಮನೋವಿಜ್ಞಾನ ಜರ್ನಲ್ ಆಗಿದೆ.
ವಿಭಾಗದಲ್ಲಿರುವ ಸುಸಜ್ಜಿತ ಪ್ರಯೋಗಾಲಯವು ಅತ್ಯಾಧುನಿಕ ಸೌಲಭ್ಯಗಳಿಂದಾಗಿ ಜಾಗತಿಕ ಮನ್ನಣೆಗೆ ಪಾತ್ರವಾಗಿತ್ತು. ಫುಲ್‌ಬ್ರೈಟ್ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಡಬ್ಲ್ಯು ಲೆಸ್ಲೀ ಬಾರ್ನೆಟ್ ಅವರ ಮೆಚ್ಚುಗೆಯನ್ನೂ ಗಳಿಸಿತ್ತು.
ಹೆಜ್ಜೆಗುರುತು: ಎಂ.ವಿ.ಗೋಪಾಲಸ್ವಾಮಿ ಅವರಲ್ಲಿ ತರಬೇತಿ ಪಡೆದ ಪ್ರೊ.ಎಂ.ಬಸವಣ್ಣ ತಿರುಪತಿ ವಿವಿ ಮನೋವಿಜ್ಞಾನ ವಿಭಾಗ ಮುನ್ನಡೆಸಿದ್ದಾರೆ. ಪಿ.ಕೃಷ್ಣಮೂರ್ತಿ, ಪ್ರೊ.ಎಂ.ಪರಶಿವಮೂರ್ತಿ, ಎಚ್.ಎಸ್.ಈಶ್ವರ್, ಪ್ರೊ.ಎಂ.ಎಸ್.ತಿಮ್ಮಪ್ಪ (ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ) ಸೇರಿದಂತೆ ಹಲವು ಪ್ರಮುಖ ಪ್ರಾಧ್ಯಾಪಕರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಯ ಹೆಜ್ಜೆ ಗುರುತನ್ನು ಅವರು ಮೂಡಿಸಿದ್ದಾರೆ.
ಪ್ರೊ.ಮೇವಾ ಸಿಂಗ್, ಪ್ರೊ.ಪಿ.ಪ್ರಕಾಶ್, ಪ್ರೊ.ಕಿರಣ್‌ಕುಮಾರ್, ಪ್ರೊ.ಬಸವರಾಜಪ್ಪ, ಪ್ರೊ.ವೆಂಕಟೇಶ್‌ಕುಮಾರ್, ಪ್ರೊ.ಎಸ್.ಜ್ಯೋತಿ ಹಾಗೂ ಪ್ರಿ.ಶ್ರೀಮತಿ ವಿಭಾಗದಲ್ಲಿ ಕಾರ್ಯನಿರ್ವಹಿಸಿ, ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರಸ್ತುತ ಮುಖ್ಯಸ್ಥರಾಗಿರುವ ಪ್ರೊ.ಸಂಪತ್ ಕುಮಾರ್ ನೇತೃತ್ವದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯ ನಡಿಗೆಯನ್ನು ವಿಭಾಗ ಮುಂದುವರಿಸಿದೆ.
ವಿಭಾಗದಲ್ಲಿ ಇದೀಗ ಮುಖ್ಯಸ್ಥರು ಹಾಗೂ ನಾಲ್ವರು ಅತಿಥಿ ಉಪನ್ಯಾಸಕರು, ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು, 15 ಮಂದಿ ಅರೆಕಾಲಿಕ ಸಂಶೋಧಕರು, ಮೊದಲ ವರ್ಷದ 35 ಹಾಗೂ ದ್ವಿತೀಯ ವರ್ಷದ 37 ವಿದ್ಯಾರ್ಥಿಗಳು ‘ಎಂಎಸ್ಸಿ ಇನ್ ಸೈಕಾಲಜಿ’ ವ್ಯಾಸಂಗ ಮಾಡುತ್ತಿದ್ದಾರೆ.
‘ಮೈಸೂರು ವಿಶ್ವವಿದ್ಯಾಲಯದ ಸಹಕಾರದೊಂದಿಗೆ, ಈ ಶೈಕ್ಷಣಿಕ ವರ್ಷವಿಡೀ ಶತಮಾನೋತ್ಸವ ಆಚರಣೆ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ’ ಎಂದು ಮುಖ್ಯಸ್ಥ ಪ್ರೊ.ಸಂಪತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶತಮಾನೋತ್ಸವ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನೋಂದಣಿಯಾಗಿದೆ. ವಿಭಾಗ ಮತ್ತು ಹಿಂದಿನ ವಿದ್ಯಾರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಈ ಮೂಲಕ ಹೊಂದಲಾಗಿದೆ. 140 ವಿದ್ಯಾರ್ಥಿಗಳು ಈಗ ಕೈಜೋಡಿಸಿದ್ದಾರೆ.
ಇಲ್ಲಿ ಕಲಿತ ವಿದ್ಯಾರ್ಥಿಗಳು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ವಿಧಿವಿಜ್ಞಾನ ಪ್ರಯೋಗಾಲಯ, ಸೇನೆ ಸೇರಿದಂತೆ ವಿವಿಧೆಡೆ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ, ಸಾರ್ವಜನಿಕ ಸೇವೆ ಮತ್ತು ರಕ್ಷಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಭಾಗದಲ್ಲಿ ರಾಷ್ಟ್ರಕವಿ ಕುವೆಂಪು, ನಿವೃತ್ತ ಕುಲಪತಿ ಪ್ರೊ.ತಿಮ್ಮಪ್ಪ, ಪ್ರೊ.ಎಚ್.ಎನ್.ಮೂರ್ತಿ, ಪ್ರೊ.ವಿನೋದ ಮೂರ್ತಿ, ಪ್ರೊ.ಇಂದಿರಾ ಜಯಪ್ರಕಾಶ್, ಪ್ರೊ.ಅಚಲಾ ಉಮಾಪತಿ ಮತ್ತು ಪ್ರೊ.ಪಿ.ನಟರಾಜ್, ಐಐಎಂ ಷಣ್ಮುಗಂ, ಎಸ್.ರಾಮಚಂದ್ರ, ಮುತ್ತಯ್ಯ (ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾಜಿ ನಿರ್ದೇಶಕ) ಮೊದಲಾದವರು ಈ ವಿಭಾಗದಿಂದ ಬಂದವರೇ. ಇಲ್ಲಿ ಕಲಿತ ಅನೇಕ ಹಳೆಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಕೆಲಸ ಹಾಗೂ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಮನೋವಿಜ್ಞಾನ ಕ್ಷೇತ್ರಕ್ಕೆ ವಿಭಾಗದಿಂದ ಕೊಡುಗೆ ಅಪಾರವಿದೆ. ನೂರು ಬ್ಯಾಚ್‌ಗಳ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆದು ಜಗತ್ತಿನ ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ.–ಪ್ರೊ.ಸಂಪತ್ ಕುಮಾರ್, ಮುಖ್ಯಸ್ಥರು, ಮನೋವಿಜ್ಞಾನ ವಿಭಾಗ, ಮಾನಸಗಂಗೋತ್ರಿ
ನಮ್ಮಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಲಿಸಿ ದೊಡ್ಡ ಸ್ಥಾನಕ್ಕೆ ಕಳುಹಿಸುವಲ್ಲಿ ವಿಭಾಗದ ಪಾತ್ರ ಮಹತ್ತರ. ಅನೇಕ ಮಹನೀಯರನ್ನು ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಾಧ್ಯಾಪಕರ ಸಂಶೋಧನೆಗಳು ಕಾರಣವಾಗಿದೆ–ಎಚ್.ಕೆ.ಮಂಜು, ಕಾರ್ಯದರ್ಶಿ, ಹಿರಿಯ ವಿದ್ಯಾರ್ಥಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.