ADVERTISEMENT

ಮೈಸೂರು |ಆಯುಧಪೂಜೆ ಖರೀದಿ ಸಂಭ್ರಮ: ಬೂದುಗುಂಬಳ, ಹೂವಿನ ಹಾರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 5:33 IST
Last Updated 1 ಅಕ್ಟೋಬರ್ 2025, 5:33 IST
<div class="paragraphs"><p>ಧನ್ವಂತ್ರಿ ರಸ್ತೆಯಲ್ಲಿ ಜನರು ಹೂವಿನ ಖರೀದಿ ನಡೆಸಿದರು </p></div>

ಧನ್ವಂತ್ರಿ ರಸ್ತೆಯಲ್ಲಿ ಜನರು ಹೂವಿನ ಖರೀದಿ ನಡೆಸಿದರು

   

– ಪ್ರಜಾವಾಣಿ ಚಿತ್ರ

ಮೈಸೂರು: ನಗರದ ವಿವಿಧ ಮಾರುಕಟ್ಟೆಗಳು ಮಂಗಳವಾರ ಗ್ರಾಹಕರಿಂದ ತುಂಬಿದ್ದು, ಎಲ್ಲೆಡೆ ಆಯುಧಪೂಜೆ ಖರೀದಿಯ ಸಂಭ್ರಮ ಕಂಡುಬಂತು.

ADVERTISEMENT

ದೇವರಾಜ ಮಾರುಕಟ್ಟೆ ಪ್ರಾಂಗಣ ಪೂರ್ತಿ ಗ್ರಾಹಕರಿಂದ ತುಂಬಿ ಹೋಗಿತ್ತು. ಚಿಕ್ಕಗಡಿಯಾರ ವೃತ್ತದಲ್ಲಿಯೂ ಜನಸಂದಣಿ ಹೆಚ್ಚಿದ್ದು, ಭರ್ಜರಿ ವ್ಯಾಪಾರ ನಡೆದಿತ್ತು. ಅಗ್ರಹಾರ, ನಂಜುಮಳಿಗೆ, ಜೆ.ಕೆ. ಮೈದಾನ ರಸ್ತೆ ಮೊದಲಾದ ಕಡೆಗಳಲ್ಲಿ ಹೂ–ಹಣ್ಣು, ಬೂದುಗುಂಬಳ, ಬಾಳೆಕಂದನ್ನು ರಾಶಿ ಹಾಕಿ ಮಾರಲಾಯಿತು.

ವಾಹನಗಳಿಗೆ, ಮನೆಯ ಬಾಗಿಲುಗಳಿಗೆ ಬಾಳೆಕಂದು– ಮಾವಿನ ತೋರಣ ಕಟ್ಟಿ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಬಾಳೆಕಂದುಗಳಿಗೆ ಬೇಡಿಕೆ ಹೆಚ್ಚಿತ್ತು. ರಸ್ತೆಬದಿಗಳಲ್ಲಿ ಕಂದುಗಳನ್ನು ರಾಶಿ ಹಾಕಲಾಗಿತ್ತು. ಜೋಡಿಗೆ ₹30–40ರಂತೆ ಮಾರಾಟ ನಡೆಯಿತು. ಬೂದಗುಂಬಳ ಉಂಡೆಯ ಲೆಕ್ಕದಲ್ಲಿ ಹಾಗೂ ತೂಕದ ಲೆಕ್ಕದಲ್ಲೂ ಖರೀದಿ ನಡೆದಿದ್ದು, ಕೆ.ಜಿ.ಗೆ ₹30ರ ಸರಾಸರಿಯಲ್ಲಿ ವ್ಯಾಪಾರವಾಯಿತು. ಮಧ್ಯಮ ಗಾತ್ರದ ಉಂಡೆಯೊಂದಕ್ಕೆ ₹150–200 ದರವಿತ್ತು.

ನಂಜುಮಳಿಗೆ ವೃತ್ತದಲ್ಲಿ ಕಡಲೆಪುರಿಯನ್ನು ರಾಶಿ ಹಾಕಿ ಮಾರಲಾಯಿತು. ಇದರೊಟ್ಟಿಗೆ ರುಚಿಕರ ಖಾರ ಬೂಂದಿ–ಸಿಹಿ ಬೂಂದಿಯ ವ್ಯಾಪಾರವೂ ಜೋರಾಗಿತ್ತು. ಅಲಂಕಾರ ಸಾಮಗ್ರಿಗಳು, ಪೂಜೆ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಿದರು.

ಹೂವು ದುಬಾರಿ:

ಎಂದಿನಂತೆ ಹಬ್ಬದ ಸಮಯದಲ್ಲಿ ಹೂವು ದುಬಾರಿ ಆಗಿತ್ತು. ಕನಕಾಂಬರ ಪ್ರತಿ ಕೆ.ಜಿ.ಗೆ ₹1500ರವರೆಗೂ ಮಾರಾಟ ನಡೆದಿದ್ದು, 100 ಗ್ರಾಂ ಬಿಡಿಹೂವಿಗೆ ₹100ರವರೆಗೆ ದರವಿತ್ತು. ಮಲ್ಲಿಗೆ ಸುವಾಸನೆ ಜೊತೆಗೆ ಬೆಲೆಯೂ ಜೋರಾಗಿದ್ದು, ಕೆ.ಜಿ.ಗೆ ₹600–800ರಂತೆ ಮಾರಾಟ ನಡೆಯಿತು.

ಆಯುಧ ಪೂಜೆ ಅಂಗವಾಗಿ ಮಹಿಳೆಯೊಬ್ಬರು ಬಾಳೆ ಕಂದು ಖರೀದಿ ಮಾಡಿದರು

ಸೇವಂತಿಗೆ ಕೆ.ಜಿ.ಗೆ ₹300–400, ಕಾಕಡ ₹400–600 ಬಿಡಿ ಗುಲಾಬಿ ₹300–400 ರಂತೆ ವ್ಯಾಪಾರವಾಯಿತು. ಸೇವಂತಿಗೆ ಪ್ರತಿ ಮಾರು ₹150–200ರ ದರದಲ್ಲಿ ಮಾರಾಟ ನಡೆದಿತ್ತು. ಕೆಲವೆಡೆ ವಾಹನಗಳಿಗೆ ಹಾಕಲೆಂದೇ ವಿಶೇಷವಾಗಿ ಹೂವಿನ ಹಾರಗಳನ್ನು ಸಿದ್ಧಪಡಿಸಿದ್ದು, ₹200ರಿಂದ ₹2 ಸಾವಿರದವರೆಗೂ ಬೆಲೆ ಇತ್ತು.

ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ದರ ಅಲ್ಪ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ₹80–100ರ ಸರಾಸರಿಯಲ್ಲಿ ವ್ಯಾಪಾರವಾಯಿತು. ನಿಂಬೆ ಹಣ್ಣು ಸಣ್ಣ ಗಾತ್ರದ್ದು ₹10ಕ್ಕೆ 4ರಂತೆ ಹಾಗೂ ದಪ್ಪ ಗಾತ್ರದ್ದು ₹20ಕ್ಕೆ 5ರಂತೆ ಮಾರಾಟವಾಯಿತು. ಸೇಬು ₹120, ದಾಳಿಂಬೆ ₹120–140ರಂತೆ ಮಾರಾಟವಾಯಿತು.

ಸಿಹಿತಿನಿಸು ಭರ್ಜರಿ ಖರೀದಿ

ಆಯುಧ ಪೂಜೆ ಬಳಿಕ ಸಿಹಿ ಹಂಚಿ ಸಂಭ್ರಮಿಸುವುದು ವಾಡಿಕೆ. ಹೀಗಾಗಿ ಕಳೆದ ಕೆಲವು ದಿನಗಳಿಂದಲೇ ಸಿಹಿತಿನಿಸು ಮಾರಾಟ ಮಳಿಗೆಗಳ ಮುಂದೆ ಜನರ ಸಾಲು ನೆರೆದಿದ್ದು ಮಂಗಳವಾರ ಗ್ರಾಹಕರು ಸಿಹಿತಿಂಡಿ ಖರೀದಿಗೆ ಮುಗಿಬಿದ್ದರು. ಸಾಕಷ್ಟು ಮಂದಿ ಮೊದಲೇ ತಿನಿಸುಗಳನ್ನು ಕಾಯ್ದಿರಿಸಿದ್ದು ಮಂಗಳವಾರ ಒಯ್ದರು. ಸಿಹಿಬೂಂದಿಗೆ ಬೇಡಿಕೆ ಹೆಚ್ಚಾಗಿತ್ತು. ಜೊತೆಗೆ ಸಣ್ಣ ಪ್ಯಾಕ್‌ಗಳಲ್ಲಿ ಕಟ್ಟಿಟ್ಟ ತಿನಿಸುಗಳನ್ನು ಹೆಚ್ಚಾಗಿ ಖರೀದಿಸಲಾಯಿತು. ಕಾಲು ಕೆ.ಜಿ. ಅರ್ಧ ಕೆ.ಜಿ. ಪ್ಯಾಕುಗಳಲ್ಲಿ ತಿನಿಸುಗಳನ್ನು ಮೊದಲೇ ತೂಗಿಟ್ಟ ಸಿಹಿಯನ್ನು ರಾಶಿ ಲೆಕ್ಕದಲ್ಲಿ ಒಯ್ಯಲಾಯಿತು. ಸಿಹಿ ತಿನಿಸು ಪ್ರತಿ ಕೆ.ಜಿ.ಗೆ ₹300–400ರಿಂದ ₹1000–1500ರವರೆಗೂ ಬೆಲೆ ಇತ್ತು.

ಕಚೇರಿಗಳಲ್ಲಿ ಆಯುಧಪೂಜೆ ಸಂಭ್ರಮ

ಬುಧವಾರ ಸರ್ಕಾರಿ ರಜೆ ಇರುವ ಕಾರಣ ಸಾಕಷ್ಟು ಕಚೇರಿಗಳು ವ್ಯಾಪಾರ ಮಳಿಗೆಗಳಲ್ಲಿ ಮಂಗಳವಾರವೇ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಾಹನಗಳು ಕಚೇರಿಯಲ್ಲಿನ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿ ನಂತರ ಅವುಗಳಿಗೆ ತಿಲಕ ಇಟ್ಟು ಪೂಜೆ ಸಲ್ಲಿಸಲಾಯಿತು. ಕಚೇರಿಗಳನ್ನು ಅಲಂಕರಿಸಿ ಬಾಗಿಲ ಮುಂಭಾಗ ಕುಂಬಳಕಾಯಿ ಒಡೆದು ಸಿಹಿ ಹಂಚಲಾಯಿತು. ಸಿಬ್ಬಂದಿಗೆ ಸಿಹಿ ವಿತರಣೆಯೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.