ADVERTISEMENT

‘ಬಹುರೂಪಿ ಬಾಬಾಸಾಹೇಬ್’: ಮೈಸೂರು ಗುರುರಾಜರ ‘ಭೀಮಕಾವ್ಯ’ದ ಮೋಡಿ!

ವನರಂಗದಲ್ಲಿ ‘ಆಳಿದ ಮಹಾಸ್ವಾಮಿಗಳು’ l ಭೂಮಿಗೀತದಲ್ಲಿ ಜ್ಯೋತಿಬಾಫುಲೆ ನಾಟಕ

​ಪ್ರಜಾವಾಣಿ ವಾರ್ತೆ
ಮೋಹನ್ ಕುಮಾರ ಸಿ.
Published 17 ಜನವರಿ 2026, 5:21 IST
Last Updated 17 ಜನವರಿ 2026, 5:21 IST
ಕಿಂದರಿಜೋಗಿ ವೇದಿಕೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಸವರಾಜು ಮತ್ತು ತಂಡದವರು ನಂದಿಕೋಲು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ. 
ಕಿಂದರಿಜೋಗಿ ವೇದಿಕೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಸವರಾಜು ಮತ್ತು ತಂಡದವರು ನಂದಿಕೋಲು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.    

ಮೈಸೂರು: ಮಂಟೇಸ್ವಾಮಿ ಕಾವ್ಯವನ್ನು ವಾರಗಟ್ಟಲೆ ನಿರರ್ಗಳವಾಗಿ ಹಾಡುವ ಜಾನಪದ ಕಲಾವಿದ ಮೈಸೂರು ಗುರುರಾಜ್‌ ಅವರು ಶುಕ್ರವಾರ ಇಲ್ಲಿನ ರಂಗಾಯಣದ ಕಿಂದರಿಜೋಗಿ ಅಂಗಳದಲ್ಲಿ ಕಟ್ಟಿದ ‘ಭೀಮಕಾವ್ಯ’ವು ಎಲ್ಲರನ್ನು ಮೋಡಿ ಮಾಡಿತು. 

‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದಲ್ಲಿನ ಜನಪದ ಉತ್ಸವವು ಆಶಯಕ್ಕೆ ಪೂರಕವಾಗಿ ಅಂಬೇಡ್ಕರ್‌ ಜೀವನ– ಸಾಧನೆಯನ್ನು ಕಾವ್ಯಮಯ ಗೊಳಿಸಿದರು. ಭೂಮಿಗೀತದಲ್ಲಿ ನಾಟಕ ಆರಂಭವಾದರೂ ಹಲವರು ಹೋಗದೇ ತನ್ಮಯರಾಗಿ ಆಲಿಸಿದ್ದು, ಕಾವ್ಯದ ಗಟ್ಟಿತನವನ್ನು ಸಾರಿತ್ತು. 

ಅಂಬೇಡ್ಕರ್ ಅವರ ಬಾಲ್ಯದ ಸಂಕಷ್ಟಗಳನ್ನು ಒಂದು ಗಂಟೆಯ ಕಿರು ಅವಧಿಯಲ್ಲಿ ಕಟ್ಟಿಕೊಟ್ಟ ನಂತರ ಗುರುರಾಜ್‌ ಅವರು ಹೇಳಿದ್ದಿಷ್ಟು, ‘ಅಂಬೇಡ್ಕರ್‌ ಅವರ ಪುಸ್ತಕಗಳನ್ನು ಓದಿ ಹಾಡು ಮಾಡಿದ್ದೇನೆ. ಏನಾದರೂ ತಪ್ಪಿ ಹಾಡಿದ್ದರೆ, ಕ್ಷಮಿಸಿ. ನನ್ನ ನಂಬರ್ ತೆಗೆದುಕೊಳ್ಳಿ. ಕರೆಮಾಡಿ ಹೇಳಿ. ತಿದ್ದಿಕೊಳ್ಳುವೆ’ ಎಂದು ಕೈಮುಗಿದರು. ಅದಕ್ಕೆ ಪ್ರೇಕ್ಷಕರೂ ಮನಸೋತು ಚಪ್ಪಾಳೆಯ ಮಳೆಗರೆದರು. 

ADVERTISEMENT

‘16 ವರ್ಷವಿದ್ದಾಗ ರಮಾಬಾಯಿ ಅವರೊಂದಿಗೆ ಬಾಬಾಸಾಹೇಬರಿಗೆ ಮದುವೆ ಆಯಿತು. ಅದೂ ಎಲ್ಲಿ. ಮುಂಬೈನ ಮೀನು ಮಾರುಕಟ್ಟೆಯಲ್ಲಿ! ಶ್ರಮ ಸಮುದಾಯದ ಮಧ್ಯೆ ಮದುವೆಯಾದ ಭೀಮನ ಬದುಕು ಜನರೊಂದಿಗೆ ಬೆಸೆದಿತ್ತು. ಅಲ್ಲವೇ’ ಎಂದು ಸಭಿಕರನ್ನೇ ಪ್ರಶ್ನಿಸಿದರು. ‘ಪತ್ನಿಯ ಜೊತೆಗೆ ಇರಬೇಕಾದವರು ವಿದೇಶಕ್ಕೆ ಹೋಗಿ ಶಿಕ್ಷಣ ಪಡೆದರು. ನಂತರ ಬರೆದಿದ್ದು ಇತಿಹಾಸ’ ಎನ್ನುತ್ತಾ.. ‘ಭೀಮ ಬಂದನೊ.. ಭೀಮ ರಾಯ ಬಂದನೂ.. ನಮ್ಮ ಭಾರತಕೆ ಸಂವಿಧಾನವನು ತಂದನೊ’ ಎನ್ನುತ್ತಾ ಭೀಮಪದ ಕಟ್ಟಿ ಜನಪದವಾಗಿಸಿದರು. 

ವೆಂಕಟಸ್ವಾಮಿ ಅಪ್ಪಾಜಿ– ಕೀಬೋರ್ಡ್‌, ಮಹಾದೇವ್‌– ತಬಲಾ, ಕಿರಣ್‌– ರಿದಂ ಪ್ಯಾಡ್, ಜಗದೀಶ್‌– ಢಕ್ಕೆ, ಬಸವರಾಜ್‌– ತಾಳ, ಪೃಥ್ವಿರಾಜ್– ಖಂಜಿರಾ, ಕಾಂತರಾಜು– ಹಿಮ್ಮೇಳದಲ್ಲಿ ಸಾಥ್‌ ನೀಡಿದರು. 

ಇದಕ್ಕೂ ಮೊದಲು ಹಾವೇರಿಯ ರಾಣೆಬೆನ್ನೂರಿನ ಬಸವರಾಜು ಮತ್ತು ತಂಡದವರು ‘ನಂದಿ ಕೋಲು’ ನೃತ್ಯ ಪ್ರದರ್ಶಿಸಿದರು. ನೃತ್ಯಗಾರರು ಕಸೆ ಅಂಗಿ, ರುಮಾಲು, ವಿಭೂತಿ ಧರಿಸಿ, ನಗಾರಿ, ನಾದಸ್ವರ, ಕರಡೆ ಮತ್ತು ಚಮ್ಮೇಳ ವಾದ್ಯದ ಹಿಮ್ಮೇಳದ ಸದ್ದಿನಲ್ಲಿ ವೀರಗಾಸೆಯ ಶೈಲಿಯಲ್ಲಿ ಹೆಜ್ಜೆ ಹಾಕಿದರು. 

ವನರಂಗದಲ್ಲಿ ದಿನೇಶ್ ಚಮ್ಮಾಳಿಗೆ ನಿರ್ದೇಶನದ ‘ಆಳಿದ ಮಾಸ್ವಾಮಿಗಳು’ ನಾಟಕದ ದೃಶ್ಯ 
ಕಿರುರಂಗಮಂದಿರದಲ್ಲಿ ಸಚಿನ್ ಮಾಲ್ವಿ ನಿರ್ದೇಶನದ ಸಿಫಾರ್ ನಾಟಕದ ದೃಶ್ಯ 
ಗುರುರಾಜ್‌ ಮೈಸೂರು
ಬಹುರೂಪಿ ಬಾಬಾ ಸಾಹೇಬ್ 25 - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದ ಕಿಂದರಿಜೋಗಿ ವೇದಿಕೆಯಲ್ಲಿ ರಾಣೆಬೆನ್ನೂರು ಹಾವೇರಿಯ ಬಸವರಾಜು ಮತ್ತು ತಂಡದವರು ನಂದಿಕೋಲು ನೃತ್ಯವನ್ನು ನಡೆಸಿಕೊಟ್ಟರು. ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

‘ತೃತೀಯ ರತ್ನ’

ವೀಕ್ಷಿಸಿದ ಸಚಿವ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಂಸದ ಸುನೀಲ್ ಬೋಸ್‌ ನಾಟಕಗಳನ್ನು ವೀಕ್ಷಿಸಲು ರಂಗಾಯಣಕ್ಕೆ ಬಂದಿದ್ದರು. ಪುಸ್ತಕ ಮತ್ತು ಕರಕುಶಲ ಮೇಳ ನಡೆಯುತ್ತಿದ್ದ ಜರ್ಮನ್ ಟೆಂಟ್‌ಗೆ ಆಗಮಿಸಿದ ಅವರು ವ್ಯಾಪಾರಿಗಳನ್ನು ಮಾತನಾಡಿಸಿದರು. ನಂತರ ಜನಪದ ಉತ್ಸವ ವೀಕ್ಷಿಸಿ ಭೂಮಿಗೀತದಲ್ಲಿ ಮಹಾರಾಷ್ಟ್ರದ ಚಂದ್ರಾಪುರದ ಲೋಕ್‌ಜಾಗೃತಿ ನಾಟ್ಯ ಸಂಸ್ಥೆ ಕಲಾವಿದರು ಅಭಿನಯಿಸಿದ ಮರಾಠಿ ನಾಟಕ ಜ್ಯೋತಿಬಾ ಫುಲೆ ರಚಿತ ‘ತೃತೀಯ ರತ್ನ’ ನಾಟಕ ನೋಡಿದರು.  ವನರಂಗದಲ್ಲಿ ನಾಲ್ವಡಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಕಲಾವಿದರು ದಿನೇಶ್‌ ಚಮ್ಮಾಳಿಗೆ ನಿರ್ದೇಶನದಲ್ಲಿ ‘ಆಳಿದ ಮಾಸ್ವಾಮಿಗಳು’ ನಾಟಕ ಅಭಿನಯಿಸಿದರೆ ಕಲಾಮಂದಿರದಲ್ಲಿ ನಡೆದ ಮಕ್ಕಳ ಬಹುರೂಪಿಯಲ್ಲಿ ಉಜ್ಜೈನಿಯ ಅಂಕೂನ್‌ ರಂಗಮಂಚ್‌ ಸಮಿತಿ ಕಲಾವಿದರು ಹಫೀಜ್‌ ಖಾನ್‌ ನಿರ್ದೇಶನದಲ್ಲಿ ‘ಅಂಬೇಡ್ಕರ್‌ ಕಾ ಬಚ್ಚನ್‌’ ನಾಟಕ ಪ್ರದರ್ಶಿಸಿದರು. ಕಿರುರಂಗಮಂದಿರದಲ್ಲಿ ಮುಂಬೈನ ಶಬ್ಧ್‌ ಥಿಯೇಟರ್‌ ಗ್ರೂಪ್‌ ಅಭಿನಯಿಸಿದ ಸಚಿನ್ ಮಾಲ್ವಿ ನಿರ್ದೇಶನದ ಹಿಂದಿ ನಾಟಕ ‘ಸಿಫಾರ್’ ಮೆಚ್ಚುಗೆಗೆ ಪಾತ್ರವಾಯಿತು.  ಶ್ರೀರಂಗದಲ್ಲಿ ನಡೆಯುತ್ತಿರುವ ಬಹುರೂಪಿ ಚಲನಚಿತ್ರೋತ್ಸವಕ್ಕೆ ವೀಕ್ಷಕರು ಹರಿದು ಬಂದರು. ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆಗಳು (ಕನ್ನಡ) ಋತುಮತಿ (ಕ) ಪಲ್ಲಟ (ಕ) ಚಿತ್ರಗಳಿಗೆ ಸಭಾಂಗಣ ತುಂಬಿತ್ತು.   

ಬಹುರೂಪಿಯಲ್ಲಿ ಇಂದು

ರಾಷ್ಟ್ರೀಯ ವಿಚಾರಸಂಕಿರಣ ಕಿರುರಂಗಮಂದಿರ: ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ– ಪತ್ರಕರ್ತ ಸಿದ್ಧಾರ್ಥ್‌ ವರದರಾಜನ್. ಅತಿಥಿ– ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌. ಬೆಳಿಗ್ಗೆ 10.30. ತಜ್ಞರ ಅಭಿಮತ– ಜಾಗತಿಕ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸಮಸ್ಯೆಗಳು– ರವಿ ಭಂಡಾರಿ ಪ್ರೊ.ಎಂ.ಜೆ.ವಿನೋದ್. ಮಧ್ಯಾಹ್ನ 12.  ಗೋಷ್ಠಿ–1; ಅಂಬೇಡ್ಕರ್ ಅವರ ಪರಿಕಲ್ಪನೆಯ ಪ್ರಜಾಪ್ರಭುತ್ವ ಒಂದು ಮುಖಾಮುಖಿ– ಚೆನ್ನೈನ ಚಿಂತಕ ಲಕ್ಷ್ಮಣನ್. ಮಧ್ಯಾಹ್ನ 2. ಸಮಕಾಲೀನ ಭಾರತ ಮತ್ತು ಒಳಗೊಳ್ಳುವ ರಾಜಕಾರಣ– ರೇಖಾರಾಜ್. ಗೋಷ್ಠಿ–2; ಜಾಗತಿಕ ಮತ್ತು ಸ್ಥಳೀಯ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ–  ಕೆ.ಪಿ. ಅಶ್ವಿನಿ. ಫ್ಯಾಸಿಸಂ ವಿರುದ್ಧ ಪ್ರತಿರೋಧದ ಸಂಕೇತವಾದ ಸಂವಿಧಾನ– ಎಚ್‌.ವಿ.ವಾಸು. ಸಂಗೀತ ಸ್ಮೃತಿ– ಪದ್ಮಪಾಣಿ ಲಲಿತಕಲಾ ಅಕಾಡೆಮಿ ನಾರಾಯಣಸ್ವಾಮಿ ಮತ್ತು ತಂಡ ಅನಿರುದ್ಧ ವಂಕರ್ ಮತ್ತು ತಂಡ ವೀರಪ್ಪ ಚನ್ನಪ್ಪ ಅಂಗಡಿ ಮತ್ತು ತಂಡ. ಸಂಜೆ 5.30  ಚಲನಚಿತ್ರೋತ್ಸವ ಶ್ರೀರಂಗ: ಹೀರೊ (ಇಂಗ್ಲಿಷ್‌). ಘುಟ್ಲೀ ಲಡೂ (ಹಿಂದಿ) ಹೆಬ್ಬುಲಿ ಕಟ್‌ (ಕನ್ನಡ) ಬೆಳಿಗ್ಗೆ 10ರಿಂದ ಸಂಜೆ 4.30  ನಾಟಕೋತ್ಸವ  ಕಲಾಮಂದಿರ: ಕೊಯಮತ್ತೂರಿನ ಆಲಂ ಥಿಯೇಟರ್ ಗ್ರೂಪ್‌ ತಂಡದವರು ಅಭಿನಯಿಸುವ ತಮಿಳು ನಾಟಕ– ಕಿಷ್ಕಿಂಧ. ಬೆಳಿಗ್ಗೆ 11 ಮತ್ತು ರಾತ್ರಿ 7  ಭೂಮಿಗೀತ: ಬೆಂಗಳೂರಿನ ಪಯಣ ರಂಗ ತಂಡದವರು ಅಭಿನಯಿಸುವ ಎನ್.ಮಂಗಳಾ ನಿರ್ದೇಶನದ ನಾಟಕ– ಕಳೆದುಹೋದ ಹಾಡು. ಸಂಜೆ 6.30  ವನರಂಗ: ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘ ಅಭಿನಯಿಸುವ ಬಿ.ಕುಮಾರಸ್ವಾಮಿ ನಿರ್ದೇಶನದ ನಾಟಕ– ಕಿವುಡ ಮಾಡಿದ ಕಿತಾಪತಿ. ರಾತ್ರಿ 7 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.