ಪಿರಿಯಾಪಟ್ಟಣ: ‘ಒಳಮೀಸಲಾತಿಯಲ್ಲಿ ಪ್ರವರ್ಗ-ಬಿ ಅಂದರೆ ಹೊಲಯ ಸಂಬಂಧಿತ ಜಾತಿಗಳಿಗೆ ರೋಸ್ಟರ್ ಬಿಂದುವಿನಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಬುಧವಾರ (ಫೆ.25) ತಾಲ್ಲೂಕಿನ ಬಲಗೈ ಜಾತಿಗಳ ಒಕ್ಕೂಟದಿಂದ ಪ್ರತಿಭಟಿಸಲಾಗುತ್ತಿದೆ’ ಎಂದು ತಾಲ್ಲೂಕು ಬಲಗೈ ಜಾತಿಗಳ ಒಕ್ಕೂಟದ ಮುಖಂಡ ಎಸ್.ರಾಮು ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
‘ಈ ಪ್ರತಿಭಟನೆ ಯಾವುದೇ ಜಾತಿ ವಿರುದ್ಧ ಅಲ್ಲ, ಸರ್ಕಾರ ನಿಗದಿಪಡಿಸಿರುವ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ನಿಗದಿಪಡಿಸುವ ರೋಸ್ಟರ್ ಬಿಂದು ಪದ್ಧತಿಯು ಅವೈಜ್ಞಾನಿಕವಾಗಿದೆ’ ಎಂದು ದೂರಿದರು.
‘ನೇಮಕಾತಿಯಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಹುದ್ದೆಗಳು ಸಿಗದಂತೆ ಅನ್ಯಾಯ ಮಾಡಲಾಗಿದೆ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ಆಗಿರುವ ಅನ್ಯಾಯವನ್ನು ಸರಿಪಡಿಸುವ ತನಕ ಯಾವುದೇ ಹೊಸ ನೇಮಕಾತಿಯನ್ನು ಮಾಡದಂತೆ ಹಾಗೂ ಸರ್ಕಾರ ಹೊಸ ರೋಸ್ಟರ್ ಪದ್ಧತಿಯನ್ನು ಜಾರಿಗೆ ತರುವ ಆದೇಶವನ್ನು ಜಾರಿ ಮಾಡಬೇಕೆಂದು ಮನವಿ ಮಾಡಲಾಗುವುದು’ ಎಂದರು.
‘ಪ್ರತಿಭಟನೆಯು ಬಲಗೈ ಜಾತಿಗಳ ಸ್ವಾಭಿಮಾನದ ಪಕ್ಷಾತೀತ ಹೋರಾಟವಾಗಿದ್ದು, ತಾಲ್ಲೂಕಿನ ಎಲ್ಲಾ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು, ನಿವೃತ್ತ ನೌಕರರು, ಮಹಿಳಾ ಸಂಘದವರು, ಪ್ರಗತಿಪರರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ಬಲಗೈ ಜಾತಿಗಳ ಒಕ್ಕೂಟದ ಮುಖಂಡರಾದ ಈರಾಜ್, ಹೇಮಂತ್ ಕುಮಾರ್, ಗಿರೀಶ್, ಎನ್.ಸಿ .ಚೆಲುವರಾಜ್, ಧನರಾಜ್, ದೊಡ್ಡ ಹರವೆ ಸಣ್ಣಯ್ಯ, ಮಹದೇವ್, ಚನ್ನಬಸವ, ಗೋಪಾಲ್, ಎಸ್.ಅಶೋಕ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.