
ಪಿರಿಯಾಪಟ್ಟಣ: ‘ಬಾಲಗಂಗಾಧರನಾಥ ಸ್ವಾಮೀಜಿಯು ದೇಶದ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ’ ಎಂದು ಇಲ್ಲಿನ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಕೆ.ಆರ್.ಪ್ರವೀಣ್ ತಿಳಿಸಿದರು.
ಸಂಸ್ಥೆಯಿಂದ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯ 13ನೇ ವರ್ಷದ ಪುಣ್ಯ ಸಂಸ್ಮರಣೆ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಸ್ವಾಮೀಜಿಗಳು ಮೂರೂವರೆ ದಶಕಗಳ ಕಾಲ ಮಠವನ್ನು ಮುನ್ನಡೆಸಿ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಂದಿಗೂ ಅನೇಕ ಕುಟುಂಬಗಳಿಗೆ ಜೀವನ ಆಧಾರವಾಗಿ ನಿಂತಿದ್ದಾರೆ. ಇಂಥ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ‘ಮಠವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ತ್ರಿವಿಧ ದಾಸೋಹವನ್ನು ನಾಡಿನಾದ್ಯಂತ ಮಾಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿ ಹೋಗಿದ್ದಾರೆ’ ಎಂದು ಸ್ಮರಿಸಿದರು.
ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಕ್ತದಾನ ಮಾಡಿದರು.
ತಾಲ್ಲೂಕು ಒಕ್ಕಲಿಗರ ಹಿತರಕ್ಷಣಾಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಉದಯ್, ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ರಾಜೇಗೌಡ, ಉಪಾಧ್ಯಕ್ಷ ಮೋಹನ್ , ಮುಖಂಡರಾದ ಶ್ರೀನಿವಾಸ್, ಸುಬ್ರಹ್ಮಣ್ಯ, ಶರತ್, ಕಾಲೇಜು ಆಡಳಿತಾಧಿಕಾರಿ ಸುಧಾಕರ್ ಹಾಗೂ ಪ್ರಾಂಶುಪಾಲರಾದ ಪ್ರವೀಣ್ ಕೆಆರ್,ಕಿರಣ್ ಬಿ ವೈ ಮುಖ್ಯ ಶಿಕ್ಷಕಿ ದಿವ್ಯ ಉಪನ್ಯಾಸಕರಾದ ಸ್ವಾಮಿಗೌಡ ಮಹಾದೇವ್, ಸ್ವಾಮಿ, ಚನ್ನಕೇಶವ ವಿಜಯ್, ನಾಗನಂದ್, ಮೋಹನ್, ಪಲ್ಲವಿ, ಪ್ರೀತು, ಶ್ರುತಿ, ಸುಮಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.