ADVERTISEMENT

2 ಎ ವರ್ಗಕ್ಕೆ ಸೇರಿಸಿ; ಬಲಿಜರ ಆಗ್ರಹ

ಬಲಿಜ ಬಣಜಿಗ ಸಂಘದಿಂದ ಬಿ.ಎಸ್.ಯಡಿಯೂರಪ್ಪಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 15:39 IST
Last Updated 25 ಆಗಸ್ಟ್ 2019, 15:39 IST

ಮೈಸೂರು: ‘ನೀವು ಈ ಹಿಂದೆ ನೀಡಿದ್ದ ಭರವಸೆಯಂತೆ, ಬಲಿಜ ಬಣಜಿಗ ಸಂಘವನ್ನು 2 ಎ ವರ್ಗಕ್ಕೆ ಸೇರ್ಪಡೆಗೊಳಿಸಿ’ ಎಂದು ಸಂಘದ ಅಧ್ಯಕ್ಷ ರೇಣು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

‘2010ರಲ್ಲಿ ಯಡಿಯೂರಪ್ಪ ಅವರೇ, ನಮ್ಮ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು 2 ಎ ಸೌಲಭ್ಯ ನೀಡಿದ್ದರು. ಆಗ ನೀಡಿದ್ದ ಭರವಸೆಯಂತೆ ಉದ್ಯೋಗ, ರಾಜಕೀಯ ಮೀಸಲಾತಿಯನ್ನು ಇದೀಗ ನೀಡಬೇಕು’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಿಜೆಪಿ ಸರ್ಕಾರ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೇ, ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾಗುತ್ತದೆ‌’ ಎಂದು ಸಂಘದ ಕಾರ್ಯದರ್ಶಿ ಟಿ.ಎಸ್.ಸತ್ಯನಾರಾಯಣ ಎಚ್ಚರಿಸಿದರು.

ADVERTISEMENT

‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಬಲಿಜರಿದ್ದರೂ, ಸಮಾಜದ ಸಂಘಟನೆ ಬಲಾಢ್ಯವಾಗಿಲ್ಲ. ಹೆಚ್ಚೆಚ್ಚು ಜನರು ಸಂಘದ ಸದಸ್ಯರಾಗುವ ಮೂಲಕ ಸಂಘಟನೆ ಭದ್ರಗೊಳಿಸಬೇಕಿದೆ. ಸಂಘಟನೆ ಸದೃಢಗೊಂಡಂತೆ, ಸರ್ಕಾರಿ ಸೌಲಭ್ಯಗಳು ಹೆಚ್ಚು ಸಿಗಲಿವೆ’ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಸುಬ್ಬಯ್ಯ ಮನವಿ ಮಾಡಿದರು.

ಉಪಾಧ್ಯಕ್ಷ ಮೋಹನ್, ಖಜಾಂಚಿ ಟಿ.ಕೆ.ಉಮೇಶ್, ಸದಸ್ಯ ಲಿಂಗರಾಜು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.