ADVERTISEMENT

ಮೈಸೂರು: ಬಾಳೆ ವೈವಿಧ್ಯ ಪರಿಚಯಿಸಿದ ಮೇಳಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 7:05 IST
Last Updated 10 ನವೆಂಬರ್ 2025, 7:05 IST
ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರ ನಡೆದ ಬಾಳೆ ಮೇಳದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರ ನಡೆದ ಬಾಳೆ ಮೇಳದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ಮೈಸೂರು: ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರ ನಡೆದ ಬಾಳೆ ಮೇಳ ಯಶಸ್ವಿ ತೆರೆ ಕಂಡಿತು.

ಸಹಜ ಸಮೃದ್ಧ ಸಂಸ್ಥೆ, ಐಸಿಎಆರ್ -ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಕಿಸಾನ್ ಬಂಡಿ ಹಾಗೂ ಅಭಯ್ ನ್ಯಾಚುರಲ್ ಫುಡ್ಸ್‌ ಮತ್ತು ಬಾಕಾಹು ಅಡ್ಡ ಆರ್ಗ್ಯಾನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಮೇಳದಲ್ಲಿ ಬಾಳೆಯ ವೈವಿಧ್ಯ ನೋಡಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ವಿವಿಧ ತಳಿಗಳ ಬಾಳೆ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆಯಾದ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಗ್ರಾಹಕರು, ರೈತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಳಿಗಳ ಮಾಹಿತಿ ಪಡೆದರು. ಬಾಳೆ ಹಣ್ಣು, ಸಸಿ, ಗೆಡ್ಡೆ, ಮೌಲ್ಯವರ್ಧಿತ ಪದಾರ್ಥಗಳನ್ನು ಖರೀದಿಸಿದರು.

ADVERTISEMENT

ಶಿರಸಿಯ ಬಾಳೆ ಸಂರಕ್ಷಕ ಪ್ರಸಾದ್ ರಾಮ ಹೆಗಡೆ ಅವರು ತಂದಿದ್ದ ನಮಸ್ತೆ ಬಾಳೆ, ಐಸ್‌ಕ್ರೀಂ ಬಾಳೆ, ಕರಿ ಬಾಳೆ, ಕಾಡು ಬಾಳೆ, ಕೆಂಪು ಬಾಳೆ, ಸಹಸ್ರ ಬಾಳೆಯ ಕಂದುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು. ಕೆಲವು ಅಪರೂಪದ ಬಾಳೆ ತಳಿಗಳ ಕಂದಿನ ಬೆಲೆ ₹ 3ಸಾವಿರ ಇತ್ತು! ಇದನ್ನು ಖರೀದಿಸಲು ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಆಂಧ್ರದಿಂದ ಆಸಕ್ತ ರೈತರು ಬಂದಿದ್ದು ವಿಶೇಷವಾಗಿತ್ತು ಎಂದು ಆಯೋಜಕರು ತಿಳಿಸಿದರು.

ಮೈಸೂರಿನ ಸಹಜ ಸೀಡ್ಸ್ ರೈತ ಕಂಪನಿ ನಂಜನಗೂಡು ರಸಬಾಳೆ, ಮದರಂಗಿ, ಫಿಂಗರ್ ಬಾಳೆ, ಪೂವನ್, ಕರ್ಪೂರವಲ್ಲಿ, ಚಂದ್ರ ಬಾಳೆ ಎಲಕ್ಕಿ ಬಾಳೆಗಳ 2,500 ಗಿಡ ಮತ್ತು ಗೆಡ್ಡೆಗಳನ್ನು ಮಾರಿದರು.

ಮೈಸೂರು ಭಾಗದಲ್ಲಿ ಬಾಳೆಯ ವೈವಿಧ್ಯ ಸಂರಕ್ಷಣೆಗೆ ಆಸಕ್ತ ಬಾಳೆ ಕೃಷಿಕರ ಸಂಘಕ್ಕೆ ಚಾಲನೆ ನೀಡಲಾಯಿತು. 

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ‘ನಾ ಕಂಡಂತೆ ಬಾಳೆ’ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಮೌಲ್ಯಾ ಎಸ್. (ಪ್ರಥಮ), ನಯನಾ ಎಚ್‌.ಆರ್. (ದ್ವಿತೀಯ),  ಶ್ರೀಆದ್ಯಾ ಕೋಟ (ತೃತೀಯ) ಮತ್ತು ಹಿರಿಯರ ವಿಭಾಗದಲ್ಲಿ ಈಶನ್ ಬಿ. (ಪ್ರಥಮ), ಧೀರಜ್ ಕೆ. (ದ್ವಿತೀಯ) ಹಾಗೂ ಗೋಕುಲ್ (ತೃತೀಯ) ಬಹುಮಾನ ಗಳಿಸಿದರು. ಕಲಾವಿದ ವಿಷ್ಣು ತೀರ್ಪುಗಾರರಾಗಿದ್ದರು.

ಬಾಳೆ ಅಡುಗೆ ಸ್ಪರ್ಧೆಯಲ್ಲಿ ವತ್ಸಲಾ (ಪ್ರಥಮ), ಮಂಜುಳಾ (ದ್ವಿತೀಯ) ಮತ್ತು ನಾಗವೇಣಿ ವಿರೂಪಾಕ್ಷ (ತೃತೀಯ) ಬಹುಮಾನ ಪಡೆದರು. ಶ್ರೀವತ್ಸ ಗೋವಿಂದರಾಜು, ಸುಮತಿ, ಲೋಕೇಶ್ ಅವಂತಿ ಮತ್ತು ದೀಪಕ್ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.