ADVERTISEMENT

ಮೈಸೂರು: ‘ಕ್ರಿಪ್ಟೊ ಕರೆನ್ಸಿ; ಇರಲಿ ಎಚ್ಚರ’

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 7:26 IST
Last Updated 13 ಸೆಪ್ಟೆಂಬರ್ 2023, 7:26 IST
ಮೈಸೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ಕಾರಿನ ಚಕ್ರ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿದರು. ರಮೇಶ್‌ ಬಾನೋತ್‌, ಎಂ.ಮುತ್ತುರಾಜು, ಎಸ್‌.ಜಾಹ್ನವಿ, ಗಂಗಾಧರ ಸ್ವಾಮಿ, ಎಲ್.ಅರುಣ್ ಇದ್ದರು ಪ್ರಜಾವಾಣಿ ಚಿತ್ರ
ಮೈಸೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ಕಾರಿನ ಚಕ್ರ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿದರು. ರಮೇಶ್‌ ಬಾನೋತ್‌, ಎಂ.ಮುತ್ತುರಾಜು, ಎಸ್‌.ಜಾಹ್ನವಿ, ಗಂಗಾಧರ ಸ್ವಾಮಿ, ಎಲ್.ಅರುಣ್ ಇದ್ದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣಗಳು ಈಚೆಗೆ ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್‌ ಬಾನೋತ್‌ ಕೋರಿದರು.

‘ಸೆ.8 ರಂದು ಇದೇ ರೀತಿಯ ವಂಚನೆ ಪ್ರಕರಣ ಒಂದರಲ್ಲಿ ಸಾಫ್ಟ್‌ವೇರ್‌ ಉದ್ಯಮಿಯೊಬ್ಬರು ₹16 ಲಕ್ಷ ಕಳೆದುಕೊಂಡಿದ್ದರು. ‘ಹಣ ಕಳೆದು ಕೊಂಡವರು ತಕ್ಷಣ ಇಲಾಖೆಗೆ ಮಾಹಿತಿ ನೀಡಿದ ಕಾರಣ ಸುಮಾರು ₹12 ಲಕ್ಷ ಹಣ ಹಿಂಪಡೆಯಲು ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಈ ಹಿಂದೆ ಇದೇ ರೀತಿಯ ಎರಡು ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ₹74 ಲಕ್ಷ ಕಳೆದುಕೊಂಡಿದ್ದರು. ಸಾರ್ವಜನಿಕರು ಆದಷ್ಟೂ ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಕಾರಿನ ಚಕ್ರ ಕಳ್ಳರ ಬಂಧನ: ರಾತ್ರಿ ಹೊತ್ತು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಚಕ್ರಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುವೆಂಪುನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶ್ರೀರಂಗಪಟ್ಟಣದ ಗಂಜಾಂನ ಸಿದ್ದಿಕ್ (24), ಶಾರೂಖ್ ಖಾನ್ (25), ಮೈಸೂರು ನಗರದ ಕೆಸರೆಯ ಸಕ್ಲೆನ್ ಮುಷ್ತಾಕ್‌ (24) ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ ₹2.56 ಲಕ್ಷ ಮೌಲ್ಯದ ಮೂರು ಕಾರುಗಳ 12 ಚಕ್ರಗಳು, ಕಳ್ಳತನ ಮಾಡಿದ್ದ 2 ಸ್ಕೂಟರ್‌ಗಳು, ಕೃತ್ಯಕ್ಕೆ ಬಳಸಿದ್ದ ₹1.5 ಲಕ್ಷ ಮೌಲ್ಯದ ಕಾರ್‌, ₹40 ಸಾವಿರ ವೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

‘ದಟ್ಟಗಳ್ಳಿಯ ಯೂನಿವರ್ಸಿಟಿ ಲೇಔಟ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರ ಕಳವಾಗಿರುವ ಬಗ್ಗೆ ಕಾರಿನ ಮಾಲೀಕರು ನೀಡಿದ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಮೂವರು ಖದೀಮರನ್ನು ಬಂಧಿಸಿದ್ದಾರೆ’ ಎಂದು ರಮೇಶ್‌ ಬಾನೋತ್‌ ತಿಳಿಸಿದರು.

ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುವೆಂಪು ನಗರ ಠಾಣೆ ಇನ್‌ಸ್ಪೆಕ್ಟರ್ ಎಲ್.ಅರುಣ್, ಎಸ್‌ಐಗಳಾದ ಎಸ್.ಪಿ.ಗೋಪಾಲ್, ಎಂ.ರಾಧಾ, ಸಿಬ್ಬಂದಿಯಾದ ವಿ.ಆನಂದ್, ಎಂ.ಪಿ. ಮಂಜುನಾಥ್, ಹಜರತ್, ಪುಟ್ಟಪ್ಪ, ಸುರೇಶ್, ನಾಗೇಶ, ಅಮೋಘ್, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.