ADVERTISEMENT

‘ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ’

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶಾಸಕ ಶ್ರೀವತ್ಸ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:35 IST
Last Updated 9 ಜುಲೈ 2025, 5:35 IST
ಟಿ.ಎಸ್‌.ಶ್ರೀವತ್ಸ
ಟಿ.ಎಸ್‌.ಶ್ರೀವತ್ಸ   

ಮೈಸೂರು: ‘ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಆರೋ‍ಪಿಸಿದರು.

‘ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಸಿಕ್ಕಷ್ಟು ಅನುದಾನ ವಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಸಿಗುತ್ತಿಲ್ಲ. ಮೈಸೂರು ನಗರ ವ್ಯಾಪ್ತಿಯಲ್ಲಿ ಚಾಮರಾಜ ಕ್ಷೇತ್ರಕ್ಕೆ ₹21 ಕೋಟಿ, ನರಸಿಂಹರಾಜ ಕ್ಷೇತ್ರಕ್ಕೆ ₹21 ಕೋಟಿ ಬಿಡುಗಡೆ ಆಗಿದ್ದು, ಕೆ.ಆರ್‌. ಕ್ಷೇತ್ರಕ್ಕೆ ಬಿಡಿಗಾಸು ನೀಡದೇ ತಾರತಮ್ಯ ಮಾಡಲಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ರಾಜ್ಯದಲ್ಲಿ 7,110 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಘೋಷಿಸಿದೆ. ಆದರೆ 224 ಕ್ಷೇತ್ರಗಳಲ್ಲಿ ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ ಕೆ.ಆರ್. ಕ್ಷೇತ್ರವನ್ನು ಮಾತ್ರ ಶೇ 100ರಷ್ಟು ನಗರ ವಿಧಾನಸಭಾ ಕ್ಷೇತ್ರ ಎಂದು ಪರಿಗಣಿಸಿ ಅನುದಾನ ನೀಡಿಲ್ಲ. ಇದಕ್ಕೆ ಏನು ಕಾರಣ’ ಎಂದು ಪ್ರಶ್ನಿಸಿದರು.

ADVERTISEMENT

‘ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದು, ಅನುದಾನದ ಕೊರತೆ ಇದಕ್ಕೆ ಕಾರಣ. ಬಸವರಾಜ ರಾಯರೆಡ್ಡಿ ಅಕ್ಕಿ ಬೇಕಾ ಇಲ್ಲ ಅಭಿವೃದ್ಧಿ ಬೇಕಾ ಎಂದು ಕೇಳುತ್ತಿದ್ದಾರೆ. ಚುನಾವಣೆ ಮೊದಲೇ ಜನರಿಗೆ ಇಂತಹ ಆಯ್ಕೆ ನೀಡಿದ್ದರೆ ಅವರೇ ಆಯ್ಕೆ ಮಾಡುತ್ತಿದ್ದರು. ಎಲ್ಲ ಶಾಸಕರ ಮಾತುಗಳನ್ನು ನೋಡಿದರೆ ಎಲ್ಲ ಶಾಸಕರಿಗೆ ಅಭಿವೃದ್ಧಿಯೇ ಬೇಕು ಎಂದು ಮನದಟ್ಟಾಗುತ್ತಿದೆ’ ಎಂದರು.

‘ಅನ್ನಭಾಗ್ಯದ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಲಾರಿಗಳ ಕುಟುಂಬಗಳಿಗೆ ಅನ್ನ ಭಾಗ್ಯ ಇಲ್ಲದಂತಾಗಿದೆ. ₹246–250 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಮುಷ್ಕರದ ಹಾದಿ ಹಿಡಿದಿರುವುದು ಖಂಡನೀಯ’ ಎಂದರು.

ದಾವಣಗೆರೆಯಲ್ಲಿ ಬಿಜೆಪಿ ಬಂಡಾಯ ನಾಯಕರ ಸಭೆ ಕುರಿತು ಪ್ರತಿಕ್ರಿಯಿಸಿದ ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ‘ಅದು ಭಿನ್ನಮತದ ಸಭೆಯಲ್ಲ. ಮಾಜಿ ಸಂಸದರ ಜನ್ಮದಿನದಲ್ಲಿ ಭಾಗಿಯಾಗಿದ್ದಾರೆ ಅಷ್ಟೇ. ಇನ್ನು ಹತ್ತು ದಿನದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರ ಘೋಷಣೆ ಆಗಲಿದೆ’ ಎಂದರು.

ಮುಖಂಡರಾದ ಜೋಗಿ ಮಂಜು, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್ ಇದ್ದರು.

ಮಠದ ಹಣಕ್ಕೂ ಕಮಿಷನ್‌ ಬೇಡಿಕೆ

‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ವಿಶ್ವ ಗಾಣಿಗರ ಮಠಕ್ಕೆ ₹3.5 ಕೋಟಿ ಅನುದಾನ ನೀಡಿದ್ದರು. ಅದನ್ನು ಬಿಡುಗಡೆ ಮಾಡಲು ಈಗಿನ ಕನ್ನಡ ಮತ್ತು ಸಂಸ್ಕತಿ ಸಚಿವ ಶಿವರಾಜ ತಂಗಡಗಿ ಕಮಿಷನ್‌ ಕೇಳಿರುವುದು ಖಂಡನಾರ್ಹ. ಮೈಸೂರಿನಲ್ಲಿ ಕಲಾವಿದರಿಗೆ ಬರಬೇಕಾದ ₹64 ಲಕ್ಷ ಅನುದಾನದ ಪೈಕಿ ಕೇವಲ ₹4 ಲಕ್ಷ ಬಿಡುಗಡೆ ಆಗಿದೆ. ಅನುದಾನವನ್ನೇ ಮೀಸಲಿಡದ ಪರಿಸ್ಥಿತಿಯಲ್ಲಿ ಸಚಿವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದರೆ ಈ ಸರ್ಕಾರದಲ್ಲಿ ಏನೇ ಮಾಡಿದರೂ ಪ್ರಚಾರವಾಗುತ್ತಿದ್ದೇವೆ ಎಂಬ ಸಂದೇಶವನ್ನು ಕೊಡುತ್ತಿದ್ದಾರೆ’ ಎಂದು ಶಾಸಕ ಶ್ರೀವತ್ಸ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.