ADVERTISEMENT

ಬಿಜೆಪಿಯಿಂದ ಹೆಣದ ಮೇಲೆ ರಾಜಕೀಯ: ಶಾಸಕ ಖಾದರ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 19:59 IST
Last Updated 20 ಏಪ್ರಿಲ್ 2020, 19:59 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಮೈಸೂರು: ‘ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವಂಥವರು. ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಬದಲು ಗೊಂದಲ ಸೃಷ್ಟಿಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌ ಸೋಮವಾರ ಇಲ್ಲಿ ಆರೋಪಿಸಿದರು.

‘ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಪ್ರಕರಣವನ್ನು ಸಮರ್ಥಿಸುವುದಿಲ್ಲ ಎಂದು ಶಾಸಕ ಜಮೀರ್‌ ಅಹ್ಮದ್‌ ಸ್ಪಷ್ಟವಾಗಿ ಹೇಳಿದ್ದಾರೆ. ಬೆಳಿಗ್ಗೆ ಬಂದಿದ್ದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ’ ಎಂದರು.

‘ಕೆಲವರು ಒಂದು ಸಮುದಾಯವನ್ನು ಗುರಿಯಾಗಿಸುವ ಷಡ್ಯಂತ್ರ ರೂಪಿಸಿದ್ದಾರೆ. ದೇಶದಲ್ಲಿ ಆಗುವ ಎಲ್ಲಾ ಸಮಸ್ಯೆಗಳಿಗೆ ಇದೇ ಸಮುದಾಯ ಕಾರಣವೆಂದು ಬಿಂಬಿಸಿ ಜನರ ತಲೆಗೆ ತುಂಬಲಾಗುತ್ತಿದೆ‘ಎಂದು ದೂರಿದರು.

ADVERTISEMENT

‘ಕೊರೊನಾ ವೈರಸ್‌ಗೆ ಹಿಂದೂ– ಮುಸ್ಲಿಂ, ಬಿಜೆಪಿ–ಕಾಂಗ್ರೆಸ್‌, ಭಾರತ –ಪಾಕಿಸ್ತಾನ ಎಂಬುದು ಗೊತ್ತಿಲ್ಲ. ಅದರ ಎದುರು ಯಾರೇ ಸಿಕ್ಕರೂ ಅಪಾಯ ಕಟ್ಟಿಟ್ಟಬುತ್ತಿ. ಆದರೆ, ಈಗ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.