ADVERTISEMENT

ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:44 IST
Last Updated 29 ಡಿಸೆಂಬರ್ 2025, 15:44 IST
   

ಮೈಸೂರು: ‘ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ತೆರವುಗೊಳಿಸದೆ ಓಲೈಸುವ ಮೂಲಕ, ರಾಜ್ಯ ಸರ್ಕಾರವು ಕರ್ನಾಟಕದ ಗೌರವ ಹರಾಜು ಹಾಕುತ್ತಿದೆ. ನೆರೆಯ ಕೇರಳದೊಂದಿಗೆ ರಾಜಿ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.

‘ಕಾಂಗ್ರೆಸ್‌ನವರು ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಮುಸ್ಲಿಮರನ್ನು ಓಲೈಸಲು ಕರ್ನಾಟಕವನ್ನು ಹೀನಾಯ ಪರಿಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ. ಆ ಪಕ್ಷದ ನಾಯಕ ವೇಣುಗೋಪಾಲ್ ಅವರನ್ನು ಮೆಚ್ಚಿಸಲು ಯೂಟರ್ನ್‌ ಪಡೆದುಕೊಂಡಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್ ಸರ್ಕಾರವು ಪ್ರತಿ ಬಾರಿಯೂ ಕೇರಳದ ವಿಚಾರ ಬಂದಾಗಲೆಲ್ಲಾ ರಾಜ್ಯದ ಹಿತಾಸಕ್ತಿ ಬದಿಗೊತ್ತುತ್ತಿದೆ. ಆನೆ ತುಳಿತ ಪ್ರಕರಣದಲ್ಲಿ ರಾಹುಲ್ ಗಾಂಧಿ ಪತ್ರ ಬರೆದರೆಂದು ₹15 ಲಕ್ಷ ಪರಿಹಾರ ಕೊಟ್ಟರು. ಕರ್ನಾಟಕದಲ್ಲಿ ಭೂಕುಸಿತವಾದರೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಅವರು, ಕೇರಳದಲ್ಲಿ ಭೂಕುಸಿತ ಆದಾಗ ನೂರು ಮನೆ ಕಟ್ಟಿಕೊಡಲು ಕ್ರಮ ವಹಿಸಿದರು. ಇದಲ್ಲದೇ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನು ಮೆಚ್ಚಿಸಲು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಮನಸ್ಸು ಮಾಡಿದ್ದರು. ಕೇರಳದ ಹಸ್ತಕ್ಷೇಪ ಜಾಸ್ತಿಯಾಗಿದೆ. ಆ ರಾಜ್ಯದ ಮುಂದೆ ಕಾಂಗ್ರೆಸ್‌ ಸರ್ಕಾರ ಮಂಡಿಯೂರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯದ ವಿಷಯದಲ್ಲಿ ತಲೆ ಹಾಕಲು ವೇಣುಗೋಪಾಲ್‌ ಯಾರು?’ ಎಂದು ಕೇಳಿದರು.

‘ತುಷ್ಟೀಕರಣ ರಾಜಕಾರಣವನ್ನು ಮಾಡಲಾಗುತ್ತಿದೆ; ನಿಯಮಗಳನ್ನೆಲ್ಲ ಉಲ್ಲಂಘಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಜನಾದೇಶವನ್ನು ಅವಮಾನಿಸಲಾಗುತ್ತಿದೆ. ಕೇರಳದ ಕೈಬೊಂಬೆಯಾಗಿ ಕೆಲಸ ಮಾಡಿ, ರಾಜ್ಯದ ಜನರ ಗೌರವ ಕಳೆಯಲಾಗುತ್ತಿದೆ’ ಎಂದು ದೂರಿದರು.

‘ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್‌ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಬರುತ್ತದೆ. ಈ ನಿರ್ಲಕ್ಷ್ಯಕ್ಕಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧಿಕಾರದಲ್ಲಿರುವುದು ಎಷ್ಟು ಸರಿ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.