ADVERTISEMENT

ಹಿಂದುಳಿದವರನ್ನು ಕೈ ಬಿಟ್ಟು, ಅಲ್ಪಸಂಖ್ಯಾತರ ಓಲೈಸುತ್ತಿರುವ ಸಿಎಂ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 7:05 IST
Last Updated 21 ಏಪ್ರಿಲ್ 2024, 7:05 IST
<div class="paragraphs"><p>ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ರಾಜ್ಯ ಘಟಕದ ಅದ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು</p></div>

ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ರಾಜ್ಯ ಘಟಕದ ಅದ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು

   

ಪ್ರಜಾವಾಣಿ ಚಿತ್ರ

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದವರ ಕೈಬಿಟ್ಟು ಅಲ್ಪಸಂಖ್ಯಾತರನ್ನು ಮಾತ್ರ ಹಿಡಿದುಕೊಂಡು ಓಲೈಸುತ್ತಿದ್ದಾರೆ. ಇದಕ್ಕೆ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ADVERTISEMENT

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ, ‘ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದವರು ನೀಡುತ್ತಿರುವ ದುರಹಂಕಾರದ ಹೇಳಿಕೆಗಳನ್ನು ಯಾರೂ ಸಹಿಸುವುದಿಲ್ಲ. ಗಂಭೀರವಾದ ಘಟನೆ ಇದು. ಆದರೆ, ವೈಯಕ್ತಿಕ ವಿಚಾರಕ್ಕೆ ಕೊಲೆಯಾಗಿದೆ ಎಂದು ಗೃಹ ಸಚಿವರು ಹೇಳಿರುವುದು ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಸಚಿವರು ಒಂದು ಕೋಮನ್ನು ಓಲೈಸಲು ಮುಂದಾಗಿದ್ದಾರೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಪೋಷಕರಿಗೆ ಸಾಂತ್ವನ ಹೇಳದೇ ನೋಯಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇದರ ವಿರುದ್ಧ ನಾವು ಚುನಾವಣೆಯನ್ನು ಬದಿಗಿಟ್ಟು ಹೋರಾಡುತ್ತಿದ್ದೇವೆ’ ಎಂದರು.

‘ಇದು ಲವ್ ಜಿಹಾದ್ ಎಂದು ಯುವತಿಯ ‍ಪೋಷಕರೇ ಹೇಳಿದ್ದಾರೆ. ರಾಜ್ಯದಲ್ಲಿರುವುದು ತಾಲಿಬಾನ್ ಸರ್ಕಾರ ಎಂದು ಜನರೇ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರಿಗೆ ಚೊಂಬೇ ಗತಿಯಾಗಲಿದೆ. ಕಾಂಗ್ರೆಸ್‌ನವರ ಜಾಹೀರಾತು ಅಥವಾ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಏನಾದರೂ ಜಾಹೀರಾತು ಕೊಟ್ಟುಕೊಳ್ಳಲಿ. ಜನರು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ‌ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ 50 ಸೀಟುಗಳನ್ನೂ ಗಳಿಸುವುದಿಲ್ಲ. ಅವರ ಗ್ಯಾರಂಟಿಗಳು ಜಾರಿಯಾಗುವುದೂ ಇಲ್ಲ’ ಎಂದರು.

ನೇಹಾ–ಆರೋಪಿ ಜತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಇಂತಹ ನೀಚ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು’ ಎಂದು ದೂರಿದರು.

‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಬಡಿಯುತ್ತಾರೆ‌ ಎಚ್ಚರವಿರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.