ADVERTISEMENT

ಮೈಸೂರು: ಬದುಕಿನ ಕತ್ತಲೆ ಹೋಗಲಾಡಿಸುವ ವಚನಗಳು

ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಶಂಕರ್ ದೇವನೂರ ಅಭಿಮತ, ಪುಸ್ತಕ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 10:33 IST
Last Updated 24 ಫೆಬ್ರುವರಿ 2020, 10:33 IST
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿಯ ಅನುರಾಗ್ ಮಕ್ಕಳ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕರಸ್ಥಲದ ನಾಗಲಿಂಗೇಶ್ವರರು’ ಕೃತಿಯನ್ನು ಶಂಕರ್ ದೇವನೂರ ಲೋಕಾರ್ಪಣೆಗೊಳಿಸಿದರು
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿಯ ಅನುರಾಗ್ ಮಕ್ಕಳ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕರಸ್ಥಲದ ನಾಗಲಿಂಗೇಶ್ವರರು’ ಕೃತಿಯನ್ನು ಶಂಕರ್ ದೇವನೂರ ಲೋಕಾರ್ಪಣೆಗೊಳಿಸಿದರು   

ನಂಜನಗೂಡು: ಅಭಿವೃದ್ಧಿಯ ಶೂಲ ದಲ್ಲಿ ಸಿಲುಕಿದ ಇಂದಿನ ಜನಾಂಗ, ನಿಸರ್ಗದೊಳಗಿನ ಹೊಕ್ಕಳು ಬಳ್ಳಿಯ ಸಂಬಂಧವನ್ನು ಕತ್ತರಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಶಂಕರ್ ದೇವನೂರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೇವಿರಮ್ಮನಹಳ್ಳಿಯ ಅನುರಾಗ್ ಮಕ್ಕಳ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವನೂರಿನ ಪಿ.ನಾಗಣ್ಣಾಚಾರ್ ಅವರ ರಚನೆಯ ‘ಕರಸ್ಥಲದ ನಾಗಲಿಂಗೇಶ್ವರರು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಿಸರ್ಗದೊಡನೆ ಬದುಕನ್ನು ಏಕೀಕರಿಸಿಕೊಂಡು ಬದುಕುವ ಬದಲು, ನಾವು ಕಡಿದುಕೊಂಡು ಬದುಕು ನಡೆಸುತ್ತಿದ್ದೇವೆ. ಮನಸ್ಸಿನಲ್ಲಿ ಕ್ರೂರತೆ ತುಂಬಿಕೊಂಡು ನಾನು, ನನ್ನ ಮನೆ, ನನ್ನ ಕುಟುಂಬ ಎಂಬ ಸ್ವಕೇಂದ್ರಿತ ಬದುಕಿಗೆ ಒಗ್ಗಿ ಹೋಗಿದ್ದೇವೆ. ಆದರೆ, ಶರಣರು ಸಮಾಜದ ಹಿತಕ್ಕಾಗಿ ಬದುಕಿದ್ದರು. ಅಂತಹ ಶಿವಶರಣರಲ್ಲಿ 14ನೇ ಶತಮಾನದಲ್ಲಿಬಸವ ತತ್ವದ ಚಿಂತನೆಗಳನ್ನು ತಿಳಿಸುತ್ತಾ, ಮಾನವೀಯ ಮೌಲ್ಯಗಳ ಬೆಳಕುಕೊಟ್ಟವರು ಕರಸ್ಥಳದ ನಾಗಲಿಂಗ ಶರಣರು ಎಂದು ಅವರು ಹೇಳಿದರು.

ADVERTISEMENT

ಜೆಎಸ್‌ಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಮಾತನಾಡಿ, ‘12ನೇ ಶತಮಾನದ ಶರಣ ತತ್ವಗಳು ಜನರಿಗೆ ತಲುಪಲಿಲ್ಲ. ಆದರೆ, 14ನೇ ಶತಮಾನದ ನಂತರ ಸಿದ್ದಲಿಂಗೇಶ್ವರರು ರಚಿಸಿದ 101 ಮಂದಿ ವಿರಕ್ತರ ಗುಂಪಿನಲ್ಲಿ ಕರಸ್ಥಲ ನಾಗಲಿಂಗೇಶ್ವರರು ಅಗ್ರಗಣ್ಯರಾಗುತ್ತಾರೆ. ಅವರು ಸಮಸಮಾಜದ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಹುಟ್ಟುವಾಗಲೇ ಕರದಲ್ಲಿ ಲಿಂಗ ಧರಿಸಿ ಬಂದಿದ್ದರಿಂದ ಅವರಿಗೆ ಕರಸ್ಥಲ ಎಂಬ ಹೆಸರು ಬಂತು. ಈ ಎಲ್ಲ
ಮಾಹಿತಿಯನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾನಿ ಸುದೀಶ್, ಹಲ್ಲರೆ ತಮ್ಮಣ್ಣಾಚಾರ್, ರಂಗಕರ್ಮಿ ಮಹದೇವ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಅತ್ತಿಖಾನೆ, ಬಸವ ಸೇವಾ ಸಮಿತಿ ಅಧ್ಯಕ್ಷ ಪ್ರಭುಲಿಂಗಸ್ವಾಮಿ, ಅನುರಾಗ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೋಮಶೇಖರಮೂರ್ತಿ ಉಪಸ್ಥಿತರಿದ್ದರು.

‘ಅಂತರಂಗದಲ್ಲಿ ಇನ್ನೂ ಇದೆ ಅಂಧಕಾರ’

ಸಿಂಧೂ ನಾಗರಿಕತೆಯ ಉಗಮದ ಬಗ್ಗೆ ಜಗತ್ತಿನ ಎಲ್ಲಾ ಇತಿಹಾಸಕಾರರು ತಲೆಕೆಡಿಸಿಕೊಂಡಿದ್ದಾರೆ. ಅಂತೆಯೇ ದೇಶದಲ್ಲಿ ವಚನ ಸಾಹಿತ್ಯದ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಬೇರೆ ಯಾವುದೇ ಸಾಹಿತ್ಯ ಪ್ರಕಾರಕ್ಕೆ ತಲೆಕೆಡಿಸಿಕೊಂಡಿಲ್ಲ. ಅಂತಹ ಚಿಂತನೆಯನ್ನು ವಚನ ಸಾಹಿತ್ಯ ನೀಡಿದೆ. ನಾವು ಸಾಮಾಜಿಕ ಕಾರಣಗಳಿಗಾಗಿ ಒಟ್ಟಿಗೆ ಓಡಾಡುತ್ತೇವೆ. ಹೋಟೆಲ್‍ಗಳಲ್ಲಿ ಸಹಪಂಕ್ತಿ ಭೋಜನ ಮಾಡುತ್ತೇವೆ. ಆದರೆ, ಅಂತರಂಗದಲ್ಲಿ ಇನ್ನೂ ಕತ್ತಲೆಯಿದೆ. ಅಂತಹ ಕತ್ತಲೆಯನ್ನು ವಚನ ಸಾಹಿತ್ಯ ಹೋಗಲಾಡಿಸುತ್ತದೆ. ಬಸವಣ್ಣನವರ ತತ್ವವನ್ನು ಹೊತ್ತು ತಿರುಗಿದ ಕರಸ್ಥಲ ನಾಗಲಿಂಗೇಶ್ವರರು ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸಿದ್ದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.