ADVERTISEMENT

‘ಬುದ್ಧ ವಿಷ್ಣುವಿನ ದಶಾವತಾರವಲ್ಲ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:46 IST
Last Updated 15 ಅಕ್ಟೋಬರ್ 2024, 6:46 IST
ಮೈಸೂರಿನ ಮಾನಸಗಂಗೋತ್ರಿಯ ಬುದ್ಧ ಬಳಗದಿಂದ ಬುದ್ಧ ಪ್ರತಿಮೆ ಬಳಿ ನಡೆದ 68ನೇ ಧಮ್ಮ ಸ್ವೀಕಾರ ದಿನಾಚರಣೆಯಲ್ಲಿ ಬಳಗದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮೈಸೂರಿನ ಮಾನಸಗಂಗೋತ್ರಿಯ ಬುದ್ಧ ಬಳಗದಿಂದ ಬುದ್ಧ ಪ್ರತಿಮೆ ಬಳಿ ನಡೆದ 68ನೇ ಧಮ್ಮ ಸ್ವೀಕಾರ ದಿನಾಚರಣೆಯಲ್ಲಿ ಬಳಗದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಮೈಸೂರು: ‘ಬುದ್ಧ ವಿಷ್ಣುವಿನ ದಶಾವತಾರ ಎಂಬುದು ಸುಳ್ಳು’ ಎಂದು ಮಾನಸಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಗುರುಸಿದ್ಧಯ್ಯ ಅವರು ಹೇಳಿದರು.

ಮಾನಸಗಂಗೋತ್ರಿಯ ಬುದ್ಧ ಬಳಗದಿಂದ ಇಲ್ಲಿನ ಬುದ್ಧ ಪ್ರತಿಮೆ ಬಳಿ ಸೋಮವಾರ ನಡೆದ 68ನೇ ಧಮ್ಮ ಸ್ವೀಕಾರ ದಿನಾಚರಣೆಯಲ್ಲಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

‘ಅವತಾರಗಳಿಂದ ಬುದ್ಧನನ್ನು ಬಿಡಿಸಿಕೊಂಡು ಶ್ರೇಷ್ಠ ಮಾನವನಾಗಿ, ಜ್ಞಾನಿಯಾಗಿ ನೋಡಬೇಕು. ಅಂಬೇಡ್ಕರ್ ಅವರ ಜ್ಞಾನದ ಬೆಳಕಿನಲ್ಲಿ ಆತನನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಶೋಕನ ಕಾಲದಲ್ಲಿ ಉನ್ನತ ಹಂತ ತಲುಪಿದ್ದ ಬುದ್ಧ ಧಮ್ಮವು ಭಾರತದಿಂದ ಮಧ್ಯ ಏಷ್ಯಾವರೆಗೂ ಬೆಳೆದಿತ್ತು. ಭಾರತಕ್ಕೆ ವಲಸೆ ಬಂದ ಜನಗಳಿಂದ ನಿಧಾನಕ್ಕೆ ಅವನತಿಗೊಂಡಿತು. ಬಿಕ್ಕುಗಳ ಹತ್ಯೆ, ಬೌದ್ಧ ವಿಹಾರಗಳ ನಾಶವಾಯಿತು. ಬಿ.ಆರ್.ಅಂಬೇಡ್ಕರ್ ಅವರಿಂದ ನಮಗೆ ಮತ್ತೆ ಬೌದ್ಧ ಧಮ್ಮ ದೊರಕಿತು. ಧಮ್ಮದ ಪ್ರಚಾರ ಹೆಚ್ಚಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಬೌದ್ಧ ಧಮ್ಮ ಹೊರತು ಪಡಿಸಿ ಭಾರತದಲ್ಲಿರುವ ಎಲ್ಲಾ ಧರ್ಮಗಳಲ್ಲೂ ಪುರೋಹಿತ ಚಿಂತನೆಗಳಿದ್ದು, ಗುಲಾಮಗಿರಿಗೆ ತಳ್ಳುತ್ತಿವೆ‌ ಎಂದು ಅಂಬೇಡ್ಕರ್ ಹೇಳುತ್ತಾರೆ. ಇಲ್ಲಿರುವ ಸ್ವಾತಂತ್ರ್ಯ ಬೇರೆ ಧರ್ಮಗಳಲ್ಲಿ ಕಾಣವುದು ಕಷ್ಟ’ ಎಂದರು.

ಕೆ.ಎಂ.ಶೇಷಣ್ಣಸ್ವಾಮಿ ಮತ್ತು ತಂಡದವರು ಬುದ್ಧ ಮತ್ತು ಭೀಮಗೀತೆಗಳನ್ನು ಹಾಡಿದರು.

ಬುದ್ಧ ಬಳಗದ ಜಗದೀಶ್ ಮಹದೇವಯ್ಯ, ಕೆ.ಆರ್.ರಂಗಸ್ವಾಮಿ, ಕಲ್ಲಹಳ್ಳಿ ಕುಮಾರ್, ಕುಶಾಲ್, ಕೆ.ಮಲ್ಲೇಶ್, ಗಣೇಶ್, ಲೋಕೇಶ್, ಸಿದ್ದಪ್ಪಾಜಿ, ಗೌತಮ್, ಪರಂ ಜ್ಯೋತಿ‌, ಪ್ರಜ್ವಲ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.