ADVERTISEMENT

ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಸ್ಪರ್ಧೆಯಲ್ಲಿ ಗಮನ ಸೆಳೆಯುತ್ತಿವೆ ₹12 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜಾತಿಯ ಹೋರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:29 IST
Last Updated 18 ಜನವರಿ 2026, 4:29 IST
   

ನಂಜನಗೂಡು: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಅಂಗವಾಗಿ ಆಯೋಜಿಸಿರುವ ದನಗಳ ಜಾತ್ರೆಗೆ ಹಳ್ಳಿಕಾರ್, ಅಮೃತಮಹಲ್, ಬೀಜದ ಹೋರಿಗಳು ಸೇರಿ ವಿವಿಧ ತಳಿಯ 200 ರಾಸುಗಳು ಬಂದಿವೆ.

ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರು ತಮ್ಮ ವಿವಿಧ ತಳಿಯ ರಾಸುಗಳೊಂದಿಗೆ ದನಗಳ ಜಾತ್ರೆಯಲ್ಲಿ ಕಂಡುಬಂದರು.

ದನಗಳ ಜಾತ್ರೆ ಸಮಿತಿ ಸಂಚಾಲಕ ಎಚ್.ಎನ್.ನಂಜಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು, ಮೊಳಹಲ್ಲು, ಬಾಯಿಗೂಡಿದ ಹಲ್ಲು ಜಾನುವಾರುಗಳು ದನಗಳ ಜಾತ್ರೆ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಪ್ರತಿ ವಿಭಾಗದಲ್ಲಿ ಮೊದಲ, ಎರಡನೆ ಹಾಗೂ ಮೂರನೇ ಬಹುಮಾನಗಳಿವೆ. ಮೊದಲ ಬಹುಮಾನ ₹10 ಸಾವಿರ ಮತ್ತು ಪ್ರಶಸ್ತಿ ಫಲಕ, 2ನೇ ಬಹುಮಾನ ₹7,500 ಹಾಗೂ 3ನೇ ಬಹುಮಾನವಾಗಿ ₹5 ಸಾವಿರ ಹಾಗೂ ಪ್ರಶಸ್ತಿ ಫಲಕ, ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಸ್ಪರ್ಧೆಯಲ್ಲಿ ₹12 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜಾತಿಯ ಹೋರಿಗಳೊಂದಿಗೆ ಭಾಗವಹಿಸಿದ್ದ ಮೈಸೂರಿನ ಮಂಡಕಳ್ಳಿಯ ನಂಜುಂಡಸ್ವಾಮಿ ಮಾತನಾಡಿ, ರಾಸುಗಳಿಗೆ ರವಿ ಬೂಸ, ಕಳ್ಳೆ ಬೂಸ, ರವೆ ಗಂಜಿ, ಒಣ ಮತ್ತು ಹಸಿ ಹುಲ್ಲು, ಹಾಲು, ಮೊಸರು, ಕೋಳಿ ಮೊಟ್ಟೆ ಕೊಟ್ಟು ಜಾತ್ರೆಗೆ ತಯಾರಿ ಮಾಡುತ್ತೇವೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಬನ್ನೂರಿನ ರಾಹುಲ್ ಗೌಡ, ಹದಿನಾರು ಗ್ರಾಮದ ನಾಗಚಂದನ, ಗಂಜಾಂನ ನಟೇಶ್ ಅವರ ಹಳ್ಳಿಕಾರ್ ತಳಿಯ ಹೋರಿಗಳು ಜನರ ಮನಸೂರೆಗೊಂಡವು.