ADVERTISEMENT

ಕುಶಾಲತೋಪು ತಾಲೀಮು ಯಶಸ್ವಿ: ಸಿಡಿಗುಂಡಿಗೆ ಅಂಜದ ದಸರಾ ಗಜಪಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:31 IST
Last Updated 23 ಸೆಪ್ಟೆಂಬರ್ 2022, 13:31 IST
ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶುಕ್ರವಾರ ನಡೆದ ಕುಶಾಲತೋ‍‍ಪಿನ ಅಂತಿಮ ತಾಲೀಮಿನಲ್ಲಿ ಪಾಲ್ಗೊಂಡ ದಸರಾ ಆನೆಗಳು–ಪ್ರಜಾವಾಣಿ ಚಿತ್ರ
ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶುಕ್ರವಾರ ನಡೆದ ಕುಶಾಲತೋ‍‍ಪಿನ ಅಂತಿಮ ತಾಲೀಮಿನಲ್ಲಿ ಪಾಲ್ಗೊಂಡ ದಸರಾ ಆನೆಗಳು–ಪ್ರಜಾವಾಣಿ ಚಿತ್ರ   

ಮೈಸೂರು:ಏಳು ಫಿರಂಗಿಗಳಲ್ಲಿ ಹೊಮ್ಮಿದ ಸಿಡಿಮದ್ದಿನ ಅಬ್ಬರಿಸುವ ಶಬ್ಧಕ್ಕೆ ಕ್ಯಾಪ್ಟನ್‌ ‘ಅಭಿಮನ್ಯು’ ಜೊತೆ ಎಲ್ಲ ದಸರೆ ಆನೆಗಳು ಅಂಜದೆ ಧೈರ್ಯ ಪ್ರದರ್ಶಿಸಿದವು. ಕಿರಿಯ ಆನೆ ‘ಪಾರ್ಥಸಾರಥಿ’ಯೂ ಹಿಂದಡಿಯಿಡಲಿಲ್ಲ.

ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದ ಅಂಗಳದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು.

ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋ‍ಪು ಸಿಡಿಸುವಾಗ ಆನೆ, ಕುದುರೆಗಳನ್ನು ಬೆಚ್ಚದಂತೆ ನೀಡಿದ 3ನೇ ಪೂರ್ವಭ್ಯಾಸದ, ಅಂತಿಮ ತಾಲೀಮಿನಲ್ಲಿ ಗಜಪಡೆಯ 12 ಆನೆಗಳು ಹಾಗೂ ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿದ್ದವು.

ADVERTISEMENT

ಮಹೇಂದ್ರ, ಭೀಮ ಭಲೇ: ಈ ಹಿಂದಿನ ತಾಲೀಮುಗಳಲ್ಲಿ ಬೆದರಿದ್ದ 22 ವರ್ಷದ ‘ಭೀಮ’ ಹಿಂದಡಿ ಇಡಲಿಲ್ಲ.ಅನುಭವಿ ‘ಗೋಪಾಲಸ್ವಾಮಿ’ಯನ್ನು ಒತ್ತರಿಸಿಕೊಂಡು ನಿಂತು ಕದಲದೆ ಧೈರ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದನು. ಮೊದಲ ಬಾರಿಗೆ ದಸರೆಗೆ ಬಂದಿರುವ ಮಹೇಂದ್ರ ಕೂಡ ಕಾವೇರಿ ಹಾಗೂ ಅಭಿಮನ್ಯು ಮಧ್ಯೆ ಅಂಜದೆ ನಿಂತಿದ್ದನು.

ಮೊದಲೆರಡು ತಾಲೀಮಿನಲ್ಲಿ ಹೆದರಿದ್ದ ಎರಡನೇ ತಂಡದ ಆನೆಗಳು ಈ ಬಾರಿ ಎದೆನಡುಗಿಸುವ ಶಬ್ಧಕ್ಕೆ ಹೆಚ್ಚು ಬೆದರಲಿಲ್ಲ.ಹಿಂದಿನ ಸಾಲಿನಲ್ಲಿ ನಿಂತಿದ್ದ ಧನಂಜಯ, ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ ಆನೆಗಳಿಗೆ ಸರಪಳಿ ಕಟ್ಟಲಾಗಿತ್ತು.

ಮೊದಲ ಸಾಲಿಗೆ ಬಂದ ಗೋಪಿ: ದಸರಾ ಆನೆಗಳ ಎರಡನೇ ತಂಡದ ಅನುಭವಿ ಆನೆ ‘ಗೋಪಿ’ ಮೊದಲ ಸುತ್ತಿನ ಕುಶಾಲ ತೋಪು ಸಿಡಿಯುತ್ತಿದ್ದಂತೆ ಮೊದಲ ಸಾಲಿನಲ್ಲಿ ನಿಂತಿದ್ದ ಗೋಪಾಲಸ್ವಾಮಿ, ಅರ್ಜುನ, ಅಭಿಮನ್ಯು, ಅರ್ಜುನ, ಕಾವೇರಿ, ವಿಜಯಾ ಹಾಗೂಭೀಮನ ಜೊತೆಯಾದ. ತಾಳ್ಮೆಯಿಂದಲೇ ಕಬ್ಬು ಮೆಲ್ಲುತ್ತಾ ನಿಂತನು.

ಕಾಲ್ಕಿತ್ತ ಕುದುರೆ: ಅಶ್ವದಳದ ಕುದುರೆಯೊಂದು ಎರಡನೇ ಸುತ್ತಿನ ಕುಶಾಲತೋಪು ಸಿಡಿಯುವಾಗ ಸ್ಥಳದಿಂದ ಕಾಲ್ಕಿತ್ತಿತು. ಕೆಲ ಕುದುರೆಗಳು ಶಬ್ದಕ್ಕೆ ಬೆದರಿ ಅತ್ತಿಂದಿತ್ತ ಚಲಿಸಿದವು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಎಂ.ಎಸ್‌.ಗೀತಾ, ಡಿಸಿಎಫ್ ಕರಿಕಾಳನ್, ಆನೆ ವೈದ್ಯ ಡಾ.ಮುಜೀಬ್ ಸೇರಿದಂತೆ ಹಲವರು ಇದ್ದರು.

‘ತಂಡವಾಗಿ ಧೈರ್ಯ ಪ್ರದರ್ಶನ’:‘ಅಂತಿಮ ಕುಶಾಲತೋಪು ತಾಲೀಮು ಯಶಸ್ವಿಗೊಂಡಿದ್ದು, ಆನೆಗಳು ತಂಡವಾಗಿ ಧೈರ್ಯ ಪ್ರದರ್ಶಿಸಿವೆ. ಪಾರ್ಥಸಾರಥಿ, ಧನಂಜಯ ಕೂಡ ಹೆಚ್ಚು ಬೆದರಲಿಲ್ಲ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಹೇಳಿದರು.

‘ಆನೆಗಳಿಗೆ ಸರಪಳಿ ಹಾಕಿ ಕಟ್ಟಿರಲಿಲ್ಲ. ಎಲ್ಲಾ ಆನೆಗಳು ವಿವಿಧ ಹಂತದ ತಾಲೀಮುಗಳನ್ನು ಯಶಸ್ವಿಯಾಗಿ ನಡೆಸಿವೆ. ವಿಜಯದಶಮಿ 12 ದಿನವಷ್ಟೇ ಬಾಕಿ ಇದ್ದು, ಜಂಬೂಸವಾರಿಗೆ ಆನೆಗಳ ತಂಡ ಸಿದ್ಧವಾಗಿದೆ. ಆರೋಗ್ಯ ಚೆನ್ನಾಗಿದ್ದು, ಅವುಗಳ ತೂಕವೂ 200ರಿಂದ 450 ಕೆ.ಜಿ ಹೆಚ್ಚಿದೆ. ವಿಜಯದಶಮಿಗೂ ಮುನ್ನ ತೂಕ ಪರೀಕ್ಷೆ ನಡೆಯಲಿದೆ’ ಎಂದರು.

‘ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಪಟ್ಟದಾನೆ ಕೇಳಿದ್ದರು.ಧನಂಜಯ ಹಾಗೂ ಭೀಮಅರಮನೆ ಪೂಜೆಗೆ ಹೋಗಲಿವೆ’ ಎಂದು ಮಾಹಿತಿ ನೀಡಿದರು.

ಶ್ರೀರಂಗಪಟ್ಟಣ ದಸರೆಗೆ ‘ಮಹೇಂದ್ರ’:‘ಶ್ರೀರಂಗಪಟ್ಟಣದ ದಸರೆಗೆ ಮಹೇಂದ್ರ ಹಾಗೂ ಎರಡು ಹೆಣ್ಣಾನೆಗಳನ್ನು ಕಳುಹಿಸಲಾಗುವುದು. ಅಲ್ಲಿನ ಜಿಲ್ಲಾಡಳಿತ 5 ಆನೆಗಳನ್ನು ಕೇಳಿತ್ತು. ಸಿಸಿಎಫ್‌ ಅನುಮತಿ ನಂತರ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಹೇಳಿದರು.

‘ಡ್ರೋನ್‌ ಕ್ಯಾಮೆರಾ ಬಳಸದಂತೆ, ಪಟಾಕಿ ಸಿಡಿಸದಂತೆ ಹಾಗೂ ಆನೆಗಳಿಂದ 5–10 ಅಡಿ ಕಾಯ್ದುಕೊಳ್ಳುವಂತೆ ಮಾಡಲು ಅಲ್ಲಿನ ಆಡಳಿತದೊಂದಿಗೆ ಚರ್ಚಿಸಲಾಗಿದೆ. ನಿಯಮಾವಳಿ (ಎಸ್‌ಒ‍ಪಿ) ತಯಾರಿಸಲಾಗಿದೆ. ಹಿಂದಿನ ಘಟನಾವಳಿ ಮರುಕಳಿಸದಂತೆ ಮಾಡಲು ಈ ಕ್ರಮ ವಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.