
ಮೈಸೂರಿನ ಗಾನಭಾರತೀಯಲ್ಲಿ ಭಾನುವಾರ ನಡೆದ ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’ದಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ ಅವರು ‘ಮೃದಂಗ ತರಂಗ’ ಕಛೇರಿ ನೀಡಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗ | ಪ್ರಸಾರ ಭಾರತಿಯಿಂದ ದಾಖಲೀಕರಣ | ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಮೈಸೂರು: ಕರ್ನಾಟಕ ಸಂಗೀತದ ಪ್ರಧಾನ ವಾದ್ಯಗಳಾದ ಮೃದಂಗ ಹಾಗೂ ವೀಣೆಯಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ ಹಾಗೂ ವಿದುಷಿ ಎಸ್.ವಿ.ಸಹನಾ ನಾದ ಸುಧೆ ಹರಿಸಿದರು.
ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ‘ಆಕಾಶವಾಣಿ ಮೈಸೂರು’, ತನ್ನ 91ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’ದಲ್ಲಿ ‘ಮೃದಂಗ ತರಂಗ’ವು ಸಹೃದಯರಲ್ಲಿ ಭಾವದಲೆಗಳನ್ನು ಎಬ್ಬಿಸಿದರೆ, ‘ವೀಣಾ ವಾದನ’ವು ಮನ ಸೋಲುವಂತೆ ಮಾಡಿತ್ತು.
ಸಪ್ತ ಸ್ವರಗಳನ್ನು ಹೊಮ್ಮಿಸುವ ಮೃದಂಗಗಳನ್ನು ಸಾಲಾಗಿ ಇರಿಸಿ, ರಾಗಗಳನ್ನು ಹೊಮ್ಮಿಸಿ, ಲಯ ವೈವಿಧ್ಯದ ಜಾದೂವನ್ನು ಶಿವಶಂಕರಸ್ವಾಮಿ ತೆರೆದಿಟ್ಟರು. ‘ಬೃಂದಾವನ ಸಾರಂಗ’ ರಾಗದಲ್ಲಿ ಸಂಗೀತ ಕಛೇರಿ ಆರಂಭಿಸಿದ ಅವರು, ‘ತಿಶ್ರಾ’, ‘ಚತುಶ್ರ’, ‘ಕಾಂಡಾ’, ‘ಮಿಶ್ರಾ’, ‘ಸಂಕೀರ್ಣ’ ನಡೆಗಳನ್ನು ಅನಾವರಣಗೊಳಿಸಿದರು.
‘ಮೃದಂಗ’ಗಳಲ್ಲಿ ಹೊಮ್ಮುತ್ತಿದ್ದ ಸಪ್ತ ಸ್ವರಕ್ಕೆ ಕೊಳಲಿನಲ್ಲಿ ಸಮೀರ್ ರಾವ್ ಹಾಗೂ ವಯಲಿನ್‌ನಲ್ಲಿ ಜೋತ್ಸ್ಯಾ ಶ್ರೀಕಾಂತ್ ಹಾಗೂ ಕೀಬೋರ್ಡ್‌ನಲ್ಲಿ ಸಂಗೀತ್ ಥಾಮಸ್ ಅವರು ನಾದವನ್ನು ಸೇರಿಸಿ ಭಾವ ತೀವ್ರತೆಯನ್ನು ಹೆಚ್ಚಿಸಿದರು.
ತಬಲಾದಲ್ಲಿ ಆದರ್ಶ್ ಶೆಣೈ, ಡೋಲಾಕ್‌ನಲ್ಲಿ ಅನುಷ್ ಶೆಟ್ಟಿ ಸಾಥ್ ನೀಡಿದರು. ಅಷ್ಟೂ ವಾದ್ಯಗಳಲ್ಲಿ ಹೊಮ್ಮಿದ ‘ಫ್ಯೂಷನ್’ ಸಂಗೀತವು ನೋಡುಗರನ್ನು ಚಕಿತಗೊಳಿಸಿತು.
ಕೊನೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ‘ದೇಶ್’ ರಾಗ, ‘ಆದಿ ತಾಳ’ದಲ್ಲಿ ಸಂಯೋಜನೆಗೊಂಡಿರುವ ‘ವಂದೇ ಮಾತರಂ’ ಗೀತೆಯನ್ನು ನುಡಿಸಿದಾಗ, ಪ್ರೇಕ್ಷಕರ ಹೃದಯದಾಳದಲ್ಲಿನ ದೇಶಪ್ರೇಮವು ಇಡೀ ಸಭಾಗೃಹವನ್ನು ಭಾವುಕತೆಯಲ್ಲಿ ಮೀಯಿಸಿತ್ತು.
ಸಹನಾ ಮೋಡಿ:
ಎಸ್.ವಿ.ಸಹನಾ ಅವರ ವೀಣಾ ವಾದನ ಗಮನಸೆಳೆಯಿತು. ‘ಖಮಾಜ್’ ರಾಗದ ಮುತ್ತಯ್ಯ ಭಾಗವತಾರ್ ಕೃತಿ ‘ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ’ ಮೂಲಕ ಕಛೇರಿ ಆರಂಭಿಸಿದರು.
ಕರ್ನಾಟಕ ಸಂಗೀತದ ವಾಗ್ಗೇಯಕಾರ ತ್ಯಾಗರಾಜರ ‘ಅಮೃತವರ್ಷಿಣಿ’ ರಾಗದ ‘ಸರಸಿರುಹ ನಯನೆ’ ಕೃತಿಯನ್ನು ನುಡಿಸಿ ಮಂತ್ರಮುಗ್ಧಗೊಳಿಸಿದರು. ಅವರಿಗೆ ಮೃದಂಗದಲ್ಲಿ ಅರ್ಜುನ್ ಕುಮಾರ್, ಘಟಂನಲ್ಲಿ ಜಿ.ಎಸ್.ರಾಮಾನುಜನ್ ಸಾಥ್ ನೀಡಿದರು.
ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಕಛೇರಿಯನ್ನು ಪ್ರಸಾರ ಭಾರತಿಯು ದಾಖಲೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.