ಮೈಸೂರು: ‘ರಾಜ್ಯ ಸರ್ಕಾರವು ಹಿಂದೂ ಸಮಾಜವನ್ನು ಒಡೆಯಲೆಂದೇ ಸಾಮಾಜಿಕ–ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಸಲು ಹೊರಟಿದೆ. ಇದು ಮತಾಂತರಕ್ಕೆ ಪ್ರೇರಣೆ ನೀಡುವಂತೆ ಇದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕಿಸಿದರು.
‘ಸರ್ಕಾರವು ಸೋಮವಾರದಿಂದ ನಡೆಸಲು ಉದ್ದೇಶಿಸಿರುವ ಜಾತಿ ಸಮೀಕ್ಷೆಗೆ ಬಿಜೆಪಿಯ ವಿರೋಧವಿದೆ. ಸಮೀಕ್ಷೆಯ ಪಟ್ಟಿಯಲ್ಲಿ ಬೇಕಂತಲೇ ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂಬುದೂ ಸೇರಿದಂತೆ ಕೆಲವು ಕೃತಕ ಉಪಜಾತಿಗಳ ಪಟ್ಟಿಯನ್ನು ಸೇರಿಸಲಾಗಿದೆ. ಇದರ ಹಿಂದೆ ಮತಾಂತರಕ್ಕೆ ಪ್ರಚೋದನೆಯ ಹುನ್ನಾರ ಇದೆ. ಕೂಡಲೇ ಈ ಜಾತಿಗಳನ್ನು ಪಟ್ಟಿಯಿಂದ ಕೈ ಬಿಡಬೇಕು. ತರಾತುರಿಯ ಸಮೀಕ್ಷೆ ಕೈ ಬಿಟ್ಟು ವೈಜ್ಞಾನಿಕವಾಗಿ ನಡೆಸಬೇಕು’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಜಾತಿ ಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಕೇಂದ್ರವೇ ಈಗಾಗಲೇ ದೇಶದಾದ್ಯಂತ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.
‘ಈ ಹಿಂದೆ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಕಾಂತರಾಜು ಆಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ₹160-190 ಕೋಟಿ ವ್ಯಯಿಸಿದ್ದರು. ಹೀಗಿದ್ದೂ ಆ ವರದಿ ಪ್ರಕಟ ಆಗಲಿಲ್ಲ. ಈಗ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮತ್ತೆ ಸಮೀಕ್ಷೆ ಕೈಗೊಂಡಿದ್ದಾರೆ. ಸರ್ಕಾರದ ಬಳಿ ಸದ್ಯ ರಸ್ತೆ ಗುಂಡಿ ಮುಚ್ಚಲೂ ಹಣ ಇಲ್ಲ. ಹೀಗಿರುವಾಗ ₹440 ಕೋಟಿ ಹಣ ವ್ಯಯ ಆರ್ಥಿಕ ಹೊರೆಯಾಗಲಿದೆ’ ಎಂದು ಎಚ್ಚರಿಸಿದರು.
‘10 ದಿನದಲ್ಲಿ ಹೊಸ ಸಮೀಕ್ಷೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ಸರ್ಕಾರದ ಸಚಿವರೇ ಈ ಸಮೀಕ್ಷೆ ವಿರೋಧಿಸಿದ್ದಾರೆ. ಈ ಸಮೀಕ್ಷೆಯೂ ವಿಫಲವಾದರೆ ಅದಕ್ಕೆ ಸರ್ಕಾರವೇ ಹೊಣೆ. ಕಾಂಗ್ರೆಸ್ ತನ್ನ ಲೋಪ ಮುಚ್ಚಿಟ್ಟುಕೊಳ್ಳಲು ಆಗಾಗ್ಗೆ ಈ ರೀತಿಯ ತಂತ್ರ ಬಳಸುತ್ತಿದೆ’ ಎಂದು ದೂರಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.