ADVERTISEMENT

ಸ್ನೇಹಮಯಿ ಕೃಷ್ಣ ಮನೆಯಲ್ಲಿ ತಪಾಸಣೆ: ದಾಖಲೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:02 IST
Last Updated 21 ಫೆಬ್ರುವರಿ 2026, 5:02 IST
ಮೈಸೂರಿನ ಭೈರವೇಶ್ವರ ನಗರದಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಮನೆಯಲ್ಲಿ ತಪಾಸಣೆ ನಡೆಸಿ ತೆರಳಿದ ಸಿಸಿಬಿ ತಂಡ
ಮೈಸೂರಿನ ಭೈರವೇಶ್ವರ ನಗರದಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಮನೆಯಲ್ಲಿ ತಪಾಸಣೆ ನಡೆಸಿ ತೆರಳಿದ ಸಿಸಿಬಿ ತಂಡ   

ಮೈಸೂರು: ಸಾಮಾಜಿಕ ಹೋರಾಟಗಾರ, ಸ್ನೇಹಮಯಿ ಕೃಷ್ಣ ಅವರ ಇಲ್ಲಿನ ಕಚೇರಿ ಹಾಗೂ ಮನೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ತಪಾಸಣೆ ನಡೆಸಿದರು.

ಮುಡಾ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್‌ ಅವರ ದೂರು ಆಧರಿಸಿ ಕೃಷ್ಣ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಇನ್‌ಸ್ಪೆಕ್ಟರ್‌ ಪಿ.ಗೌರಿಶಂಕರ್‌ ನೇತೃತ್ವದಲ್ಲಿ 9 ಅಧಿಕಾರಿ ಹಾಗೂ ಸಿಬ್ಬಂದಿಯ ತಂಡ ಭೈರವೇಶ್ವರ ನಗರಕ್ಕೆ ಮಧ್ಯಾಹ್ನ 2.45ರ ಸುಮಾರಿಗೆ ಸರ್ಚ್‌ ವಾರಂಟ್‌ನೊಂದಿಗೆ ಧಾವಿಸಿತು.

ಕೃಷ್ಣ ಅವರ ಶಿವಕೃಪಾ ಫೈನಾನ್ಸ್‌ ಕಾರ್ಪೊರೇಷನ್ಸ್‌ ಕಚೇರಿಯಲ್ಲಿ ಹುಡುಕಾಟ ನಡೆಸಿದ ಪೊಲೀಸರು, ಬಳಿಕ ಮನೆಯಲ್ಲಿ ಮೂರು ಗಂಟೆ ತಪಾಸಣೆ ನಡಸಿದರು. ಕಂಪ್ಯೂಟರ್‌ ಪರಿಶೀಲಿಸಿ ಹಾರ್ಡ್‌ಡಿಸ್ಕ್‌ ವಶಕ್ಕೆ ಪಡೆದರು. ಅವರ ಅಂಗಿಯ ಜೇಬಿನಲ್ಲಿದ್ದ ಪೆನ್‌ಡ್ರೈವ್‌, ನಟೇಶ್‌ ನೀಡಿದ ದೂರಿಗೆ ಸಂಬಂಧಿಸಿದ ಪತ್ರದ ದಾಖಲೆಗಳನ್ನು ವಶಕ್ಕೆ ಪಡೆದರು. 

ADVERTISEMENT

ಬಂಡೀಪಾಳ್ಯದಲ್ಲಿರುವ ಅವರ ತಾಯಿ ಜಯಮ್ಮ ಮನೆಯಲ್ಲೂ ಪರಿಶೀಲಿಸಿದರು. ಅಲ್ಲಿ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ. ಇಬ್ಬರು ವಿಡಿಯೊಗ್ರಾಫರ್‌ಗಳು ವಿಡಿಯೊ ದಾಖಲಿಸಿಕೊಂಡರು.

‘ಪತಿಯು ಪ್ರತೀ ವಾರ ಎರಡು ಬಾರಿ ಬೆಂಗಳೂರಿಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಈ ಬಾರಿ ಮಗನೊಂದಿಗೆ ಹೋಗಿದ್ದರು. ಪೊಲೀಸರು ಮಧ್ಯಾಹ್ನ ಮನೆಗೆ ಸರ್ಚ್‌ ವಾರಂಟ್‌ನೊಂದಿಗೆ ಬಂದಾಗ, ಅವರು ಪೊಲೀಸ್‌ ವಶದಲ್ಲಿರುವುದು ತಿಳಿಯಿತು’ ಎಂದು ಕೃಷ್ಣ ಅವರ ಪತ್ನಿ ವಿನೋದಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಅನ್ಯಾಯದ ವಿರುದ್ಧ ಹೋರಾಡುತ್ತಿರುವುದರಿಂದಾಗಿ ಅವರನ್ನು ಸಿಲುಕಿಸಬೇಕೆಂದು, ಅವರಿಲ್ಲದ ಸಮಯದಲ್ಲಿ ಪೊಲೀಸರು ಮನೆಗೆ ಬಂದಿದ್ದಾರೆ. ಸಣ್ಣ– ಪುಟ್ಟ ವಿಚಾರಕ್ಕೆ ಬಂಧಿಸಿ ದೌರ್ಜನ್ಯ ಮಾಡುತ್ತಿರುವುದು ಭಯ ಮೂಡಿಸಿದೆ. ಇದಕ್ಕೆಲ್ಲಾ ಅವರು ಹೆದರುವುದಿಲ್ಲ. ಹೋರಾಟ ಮುಂದುವರಿಸುತ್ತಾರೆ’ ಎಂದರು.

ಮೈಸೂರಿನ ಭೈರವೇಶ್ವರ ನಗರದಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಮನೆಯಲ್ಲಿ ತಪಾಸಣೆ ನಡೆಸಿ ತೆರಳಿದ ಸಿಸಿಬಿ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.