ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಲಲಿತಮಹಲ್‌ ಹೋಟೆಲ್‌ಗೆ ಶತಮಾನೋತ್ಸವ ಸಂಭ್ರಮ

ನವೆಂಬರ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ– ಅಪ್ಪಣ್ಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 11:32 IST
Last Updated 4 ಜನವರಿ 2021, 11:32 IST
   

ಮೈಸೂರು: ಇಲ್ಲಿನ ಲಲಿತಮಹಲ್‌ ಹೋಟೆಲ್‌ ನೂರನೇ ವರ್ಷಕ್ಕೆ ಕಾಲಿಟ್ಟಿದ್ದು, ನವೆಂಬರ್‌ನಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1921ರಲ್ಲಿ ನಿರ್ಮಿಸಿದ ಈ ಹೋಟೆಲ್ಲಿನ ಶತಮಾನೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರದ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಲಾಗುವುದು. ಬಹಳ ವಿಶೇಷ ರೀತಿಯ ಸಮಾರಂಭ ಇದಾಗಲಿದೆ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌) ಅಧ್ಯಕ್ಷ ಎಂ.ಅಪ್ಪಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರಂಭದ ರೂಪುರೇಷೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಸದ್ಯದಲ್ಲೇ, ಈ ಕುರಿತು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.

ADVERTISEMENT

‘ನಮ್ಮ ಲಲಿತಮಹಲ್‌ ಹೋಟೆಲ್ಲಿನ ಆಸ್ತಿ ಒತ್ತುವರಿಗೆ ಒಳಗಾಗಿದೆಯೋ ಏನೋ ಎಂದು ಪರಿಶೀಲಿಸಲು ಬಂದೆ. ಸದ್ಯ, ಯಾವುದೇ ಒತ್ತುವರಿ ನಡೆದಿಲ್ಲ’ ಎಂದರು.

ಈ ಹೋಟೆಲ್‌ ಒಟ್ಟು 51 ಎಕರೆ 15 ಗುಂಟೆ ಪ್ರದೇಶದಲ್ಲಿ ಇದೆ. ಸುತ್ತಲೂ ಈಗಾಗಲೇ ಬೇಲಿ ನಿರ್ಮಿಸಲಾಗಿದೆ. ಕೆಲವೊಂದು ಕಡೆ ಮಾತ್ರ ಬೇಲಿಯನ್ನು ಕಡಿದು ಓಡಾಡುವುದಕ್ಕೆ ದಾರಿ ಮಾಡಿಕೊಳ್ಳಲಾಗಿದೆ. ಇದನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.‌

ಸುತ್ತಲೂ ಅನೈತಿಕ ಚಟುವಟಿಕೆಗಳು!

ಲಲಿತಮಹಲ್ ಹೋಟೆಲ್ ಬಿಟ್ಟು, ಇದರ ಸುತ್ತ ಇರುವ ಖಾಲಿ ಪ್ರದೇಶಗಳಲ್ಲಿ ಅನೈತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇದು ಹೋಟೆಲ್ಲಿನ ವರ್ಚಸ್ಸನ್ನು ಕಡಿಮೆ ಮಾಡುತ್ತದೆ. ಪೊಲೀಸರು ಇದರತ್ತ ಗಮನ ಹರಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.