ADVERTISEMENT

ಯೋಗ ದಿನದ ಅತಿಥಿಗಳು: ಕೇಂದ್ರದ ಶಿಷ್ಟಾಚಾರದ ಪ್ರಕಾರ ತೀರ್ಮಾನ- ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:56 IST
Last Updated 15 ಜೂನ್ 2022, 5:56 IST
ಸಚಿವ ಎಸ್.ಟಿ.‌ ಸೋಮಶೇಖರ್
ಸಚಿವ ಎಸ್.ಟಿ.‌ ಸೋಮಶೇಖರ್    

ಮೈಸೂರು: ಮೈಸೂರಿನಲ್ಲಿ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಯೋಗ ದಿನದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಯಾರಿರಬೇಕು ಎಂಬುದನ್ನು ಕೇಂದ್ರ ಸರ್ಕಾರದ ಶಿಷ್ಟಾಚಾರದ ಪ್ರಕಾರ ನಿರ್ಧರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.‌ ಸೋಮಶೇಖರ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ ನಡೆದಿದ್ದರೆ ತೀರ್ಮಾನಗಳನ್ನು ನಾವು ಮಾಡಬಹುದಿತ್ತು. ಆದರೆ, ಈಗ ನಾವು ಕೇಂದ್ರ ನೀಡುವ ಸೂಚನೆ ಪಾಲಿಸಬೇಕಾಗುತ್ತದೆಯಷ್ಟೆ ಎಂದು ಪ್ರತಿಕ್ರಿಯಿಸಿದರು.

ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ವೇದಿಕೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ADVERTISEMENT

ಮೋದಿ ಆಗಮನದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಾದರಿಯಲ್ಲಿ ಮೈಸೂರಿನಲ್ಲಿ ಅರಮನೆ ಹಾಗೂ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಪ್ರಧಾನಿ ಸಂಚರಿಸುವ ಮಾರ್ಗದುದ್ದಕ್ಕೂ‌ ದೀಪಾಲಂಕಾರ ಮಾಡಲಾಗುವುದು ಎಂದರು.

ಈಗಾಗಲೇ ನಗರದ ರಸ್ತೆಗಳನ್ನು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.