ADVERTISEMENT

ಸಿಇಟಿ: ಎರಡನೇ ದಿನವೂ ಸರಾಗ

ಕೋವಿಡ್‌ ಪೀಡಿತರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 12:59 IST
Last Updated 31 ಜುಲೈ 2020, 12:59 IST
ಮೈಸೂರಿನ ಮಹಾರಾಜ ಪಿಯು ಕಾಲೇಜಿನಲ್ಲಿ ಸಿಇಟಿ ಬರೆದ ವಿದ್ಯಾರ್ಥಿಗಳು
ಮೈಸೂರಿನ ಮಹಾರಾಜ ಪಿಯು ಕಾಲೇಜಿನಲ್ಲಿ ಸಿಇಟಿ ಬರೆದ ವಿದ್ಯಾರ್ಥಿಗಳು   

ಮೈಸೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವಾದ ಶುಕ್ರವಾರವೂ ಜಿಲ್ಲೆಯ 26 ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.

ಯಾವುದೇ ಗೊಂದಲ ಸೃಷ್ಟಿಯಾಗಲಿಲ್ಲ. ವಿದ್ಯಾರ್ಥಿಗಳು, ಪೋಷಕರು ಕೋವಿಡ್–19 ನಿಯಮಾವಳಿಗೆ ಪೂರಕವಾಗಿ ಸ್ಪಂದಿಸಿದರು. ಮಾಸ್ಕ್ ಧರಿಸಿ, ಪರಸ್ಪ‍ರ ಅಂತರ ಕಾಯ್ದುಕೊಂಡ ವಿದ್ಯಾರ್ಥಿಗಳು ತಮಗೆ ನಿಗದಿಯಾಗಿದ್ದ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾದರು.

ಜ್ವರ, ಶೀತ, ಕೆಮ್ಮು ಮೊದಲಾದ ಕೋವಿಡ್ ಲಕ್ಷಣ ಉಳ್ಳವರಿಗಾಗಿಯೇ ಪ್ರತ್ಯೇಕ ಕೋಣೆಯನ್ನು ಪ್ರತಿ ಕೇಂದ್ರಗಳಲ್ಲೂ ಮೀಸಲಿರಿಸಲಾಗಿತ್ತು. ಆದರೆ, ಇಂತಹ ಯಾವುದೇ ಪ್ರಕರಣ ಕಂಡು ಬರಲಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಬೆಳಿಗ್ಗೆ ನಡೆದ ಭೌತವಿಜ್ಞಾನ ಪರೀಕ್ಷೆಗೆ 11,326 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇವರ ಪೈಕಿ 8,958 ಮಂದಿ ಪರೀಕ್ಷೆಗೆ ಹಾಜರಾದರೇ, 1347 ಜನರು ಗೈರಾದರು.

ಮಧ್ಯಾಹ್ನದ ರಸಾಯನ ವಿಜ್ಞಾನ ಪರೀಕ್ಷೆಗೆ 10,304 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇವರಲ್ಲಿ 9,220 ಮಂದಿ ಪರೀಕ್ಷೆಗೆ ಹಾಜರಾದರೇ, 984 ಮಂದಿ ಗೈರಾದರು ಎಂದು ಡಿಡಿಪಿಯು ಜಿ.ಆರ್‌.ಗೀತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರೀಕ್ಷೆ ಬರೆದ ಪೀಡಿತರು
ಮೈಸೂರಿನ ಮಂಡಕಳ್ಳಿಯಲ್ಲಿನ ಕೋವಿಡ್ ಕೇರ್‌ ಸೆಂಟರ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ, ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲ್ಲೂಕು ಕೇಂದ್ರದ ಕೋವಿಡ್‌ ಕೇರ್ ಸೆಂಟರ್‌ನಲ್ಲಿ ತಲಾ ಒಬ್ಬರು ವಿದ್ಯಾರ್ಥಿ ಶುಕ್ರವಾರವೂ ಸಿಇಟಿ ಬರೆದರು.

ನಿಯಂತ್ರಿತ ವಲಯದಿಂದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರದ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದು, ಮೈಸೂರಿನ ಟೆರೇಷಿಯನ್ ಕಾಲೇಜು, ಮಹಾರಾಣಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಬರೆದರು ಎಂದು ಡಿಡಿಪಿಯು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.