ADVERTISEMENT

ಮೈಸೂರು: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:48 IST
Last Updated 17 ಜುಲೈ 2025, 7:48 IST
<div class="paragraphs"><p>ಚಾಮುಂಡೇಶ್ವರಿ ವರ್ಧಂತಿ ಸಂಭ್ರಮ</p></div>

ಚಾಮುಂಡೇಶ್ವರಿ ವರ್ಧಂತಿ ಸಂಭ್ರಮ

   

ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಮೈಸೂರು: ಶಕ್ತಿದೇವತೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ADVERTISEMENT

ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿಯನ್ನು ಇರಿಸಿ ದೇಗುಲದ ಸುತ್ತ ಮೆರವಣಿಗೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತರು ‘ಜೈ ದುರ್ಗೆ, ಜೈ ಚಾಮುಂಡೇಶ್ವರಿ’ ಎಂಬ ಘೋಷಣೆ ಕೂಗುತ್ತ ಸಂಭ್ರಮಿಸಿದರು.

ಅರಮನೆ ಪೊಲೀಸ್ ಬ್ಯಾಂಡ್ ಜೊತೆಗೆ ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಮೆರವಣಿಗೆ ಮುಂದುವರಿಯಿತು. ಆಷಾಢ ಮಾಸದ ಕೊನೆಯ ವಾರದಲ್ಲಿ ಪ್ರತಿ ವರ್ಷ ನಡೆಯುವ ಈ ಉತ್ಸವಕ್ಕೆ ಭಕ್ತರ ದಂಡು ಹರಿದು ಬಂದಿತ್ತು.

ಬೆಳಿಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ ಒಡೆಯರ್ ಚಾಮುಂಡಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ನಂತರ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.

ಶಾಸಕ ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಹಾಜರಿದ್ದರು.

ವಿಶೇಷ ಪೂಜೆ: ದೇವಸ್ಥಾನದಲ್ಲಿ ಮುಂಜಾನೆ 4 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭಗೊಂಡವು. ದೇವಿಯ ಮೂರ್ತಿಗೆ ದೇವಿ ಕೆರೆಯಿಂದ ತಂದ ಶುದ್ದ ಜಲದಿಂದ ಅಭಿಷೇಕ ಮಾಡಿ ನಂತರ ತಾಯಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ

ಬಳಿಕ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ ನೆರವೇರಿಸಲಾಯಿತು.

ಬೆಳಿಗ್ಗೆ 8ರಿಂದ ಭಕ್ತರಿಗೆ ದರ್ಶನವಕಾಶ ನೀಡಲಾಗಿತ್ತು. ನಗರದ ವಿವಿಧೆಡೆ ವರ್ಧಂತಿ‌ ಪ್ರಯುಕ್ತ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.

‘ಚಾಮುಂಡೇಶ್ವರಿ’ ಅಲಂಕಾರ: ‘ಮುಂಜಾನೆ 4 ಗಂಟೆಯಿಂದಲೇ ವಿಶೇಷ ಪೂಜೆಗಳು ನಡೆದವು. 5.30ಕ್ಕೆ ಮೂರ್ತಿಗೆ ಅಭ್ಯಂಜನ ಸ್ನಾನ ಮಾಡಿಸಿ, ಸಾಂಪ್ರದಾಯಿಕ ಪೂಜೆ ಮಾಡಲಾಯಿತು. ‘ಚಾಮುಂಡೇಶ್ವರಿ’ ಅಲಂಕಾರ ಮಾಡಲಾಗಿತ್ತು’ ಎಂದು ಮುಖ್ಯ ಅರ್ಚಕ ಶಶಿಶೇಖರ ದೀಕ್ಷಿತ್‌ ಹೇಳಿದರು.

ಬಸ್‌ನಲ್ಲಿ ಬೆಂಕಿ: ಬೆಟ್ಟಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಮತ್ತೊಂದು ಬಸ್‌ನಲ್ಲಿ ಭಕ್ತರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.